“ಸಿದ್ದರಾಮಯ್ಯನ ಪದಚ್ಯುತಿಗೆ ಕಾರಣ ನೀಲಿಕಣ್ಣಿನ ಮಂತ್ರಿ” | “ಅಸಲಿ ದಲಿತರಿಗೆ ಅಧಿಕಾರ ಕೊಡಿ” | ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಧರಣಿ ಕುಳಿತ ಎಚ್‌ಡಿಕೆ!!

ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ‘ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಕಾರ್ಯಕರ್ತರನ್ನು ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಶೇಷಾದ್ರಿಪುರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ತನಿಖೆಯ ಹೆಸರಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಬೆಳಗ್ಗೆ ಕರೆದೊಯ್ದು ರಾತ್ರಿ ತನಕ ಅಜ್ಞಾತ ಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ಪ್ರಕಟಿಸಿದ ಆರೋಪದ ಮೇಲೆ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಓರ್ವ ಕಾರ್ಯಕರ್ತನಿಗೆ ಯಾವುದೇ ನೋಟಿಸ್‌ ನೀಡದೆ ವಶಕ್ಕೆ ಪಡೆದು, ಹಲವು ಗಂಟೆಗಳ ಕಾಲ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಬುಧವಾರ ಬೆಳಗ್ಗೆ ಸುಮಾರು 6 ಗಂಟೆಗೆ ಸಾಮಾನ್ಯ ಉಡುಪಿನಲ್ಲಿದ್ದ ಆರೇಳು ಮಂದಿ ಪಕ್ಷದ ವಾರ್ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಆತನ ಮನೆಯಿಂದ ಕರೆದೊಯ್ದಿದ್ದಾರೆ. ಪತ್ನಿಯೊಂದಿಗೆ ಮಾತನಾಡಲೂ ಅವಕಾಶ ನೀಡದೆ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಬಳಿಕ ರಾತ್ರಿ 8 ಗಂಟೆಯವರೆಗೆ ಗೋದಾಮಿನಂತಹ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ಆರೋಪಿಸಿದರು. ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯದೆ ಬೇರೆಡೆ ಇರಿಸಿದ್ದು ಏಕೆ? ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಕಾರ್ಯಕರ್ತನಿಂದ ತಮ್ಮ ವಿರುದ್ಧ ಹೇಳಿಕೆ ಪಡೆಯುವ ಉದ್ದೇಶದಿಂದಲೇ ಸಭೆ ನಡೆಸಿ ಕಾರ್ಯತಂತ್ರ ರೂಪಿಸಲಾಗಿದೆ ಎಂದೂ ಕುಮಾರಸ್ವಾಮಿ ಆರೋಪಿಸಿದರು. ಆದರೆ, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾದ ಮತ್ತೋರ್ವ ಕಾರ್ಯಕರ್ತನ ಕುರಿತು ಹೆಚ್ಚಿನ ವಿವರ ನೀಡಲಿಲ್ಲ.
ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಈ ಪ್ರಕರಣದ ಪಿತಾಮಹ ಅವರೇ ಎಂದು ಆರೋಪಿಸಿದರು.

Advertisement
Advertisement

ತನಿಖೆ ನಡೆಸುವುದಾದರೆ ಮೊದಲು ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಅಧಿಕಾರದಲ್ಲಿರುವವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
“ನಮ್ಮ ಪೊಲೀಸ್ ಅಧಿಕಾರಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನಿಮಗೆ ನಿಜವಾಗಿಯೂ ಸತ್ಯ ತಿಳಿಯಬೇಕೆಂದಿದ್ದರೆ ಮುಖ್ಯಮಂತ್ರಿಯ ಮೊಬೈಲ್ ಫೋನ್ ವಶಪಡಿಸಿಕೊಂಡು ತನಿಖೆ ನಡೆಸಿ. ಆಗ ಸತ್ಯಾಂಶ ಹೊರಬರುತ್ತದೆ” ಎಂದು ಹೇಳಿದರು.
ರಾಜಕೀಯ ನಾಯಕರು ಹಾಗೂ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಲು ಸ್ಟಿಂಗ್ ಆಪರೇಷನ್‌ಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಸಾಂವಿಧಾನಿಕ ಸಂಸ್ಥೆಗಳಲ್ಲಿರುವವರನ್ನೂ ಇಂತಹ ಕೃತ್ಯಗಳ ಮೂಲಕ ಗುರಿಯಾಗಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
2024ರಲ್ಲಿ ಅಂದಿನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ರಾಜ್ಯದ ಹಿರಿಯ ನಾಯಕರಿಗೆ ಸಂಬಂಧಿಸಿದ ಖಾಸಗಿ ವಿಡಿಯೋಗಳು ಬಹಿರಂಗವಾಗುವ ಸಾಧ್ಯತೆ ಕುರಿತು ನೀಡಿದ್ದ ಹೇಳಿಕೆಯನ್ನೂ ಕುಮಾರಸ್ವಾಮಿ ಪ್ರಸ್ತಾವಿಸಿದರು.

ಪ್ರಕರಣದ ತನಿಖೆಯಲ್ಲಿ ತಮ್ಮನ್ನು ಸಿಲುಕಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಧರಣಿ ನಡೆಸಿದರು. ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಯಾವುದೇ ರೀತಿಯ ತನಿಖೆ ನಡೆಸಲು ಸಿದ್ಧವಿರುವುದಾಗಿ ಸವಾಲು ಹಾಕಿದರು. ಪೊಲೀಸ್ ಆಯುಕ್ತರ ಕಚೇರಿಯ ವತಿಯಿಂದ ಸೂಕ್ತ ಭರವಸೆ ದೊರಕಿದ ಬಳಿಕ ಸ್ಥಳದಿಂದ ತೆರಳಿದರು. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರಕರಣದಲ್ಲಿ ತಮ್ಮ ವಿರುದ್ಧ ಮೊದಲು ತನಿಖೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.
“ನಾನು ತನಿಖೆಗೆ ಒಳಪಡಲು ಇಲ್ಲಿಗೆ ಬಂದಿದ್ದೇನೆ. ಅವರಿಗೆ ಬೇಕಾದ ಯಾವುದೇ ತನಿಖೆ ನಡೆಸಲಿ. ಮೊದಲು ನನ್ನಿಂದಲೇ ಆರಂಭಿಸಲಿ. ಆ ಬಳಿಕ ನನ್ನ ಪಕ್ಷದ ಕಾರ್ಯಕರ್ತರನ್ನು ವಿಚಾರಣೆ ನಡೆಸಬಹುದು” ಎಂದು ಹೇಳಿದರು.

ತಪ್ಪು ಮಾಡಿದವರನ್ನು ರಕ್ಷಿಸುತ್ತಿರುವವರ ವಿರುದ್ಧ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರತಿಕ್ರಿಯಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ, ತಮ್ಮ ವಿರುದ್ಧದ ಅವಹೇಳನಕಾರಿ ವಿಡಿಯೋವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಈ ಸಂಬಂಧ ಅವರು ಪೊಲೀಸ್ ದೂರು ಕೂಡ ದಾಖಲಿಸಿದ್ದು, ದೂರಿನ ಆಧಾರದಲ್ಲಿ ಇಬ್ಬರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ ‘ಬಲಿತ ದಲಿತ’ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ” ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
“ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ.ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್’ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡುತ್ತಿದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page