ರಾಷ್ಡ್ರ ರಾಜಧಾನಿ ದೆಹಲಿ ಪ್ರದೇಶವು ಮತ್ತೆ ಹವಾಮಾನ ಮಾಲಿನ್ಯದ ಸಮಸ್ಯೆ ಎದುರಿಸುತ್ತಿದೆ. ಕಾಳಿಂದಿ ಕುಂಜ್ ಬಳಿಯ ಯಮುನಾ ನದಿಯಲ್ಲಿ ವಿಷಕಾರಿ ಬಿಳಿ ನೊರೆ ಮತ್ತೆ ಕಾಣಿಸಿಕೊಂಡಿದೆ. ಈ ಪ್ರದೇಶದಾದ್ಯಂತ ಗಾಳಿಯ ಗುಣಮಟ್ಟವು ʼಅನಾರೋಗ್ಯಕರʼ ವರ್ಗಕ್ಕೆ ಕುಸಿದಿದ್ದು, ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು 168 ತಲುಪಿದೆ ಎಂದು ವರದಿಯಾಗಿದೆ.
ಕಾಳಿಂದೊ ಕುಂಜ್ ಪ್ರದೇಶದ ದೃಶ್ಯಗಳು, ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ವಿಷಕಾರಿ ಬಿಳಿ ನೊರೆಯ ದಪ್ಪ ಪದರಗಳನ್ನು ತೋರಿಸಿದ್ದು, ನದಿಯಲ್ಲಿನ ಮಾಲಿನ್ಯದ ನಿರಂತರ ಸಮಸ್ಯೆಯನ್ನು ಎತ್ತಿ ತೋರಿಸಿವೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ನದಿಯನ್ನು ಪುನರುಜ್ಜೀವನಗೊಳಿಸುವ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿ, ಸುಮಾರು 9,000 ಕೋಟಿ ರೂಪಾಯಿ ಮೌಲ್ಯದ ಬೃಹತ್ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆಯನ್ನು ನಗರ ನಿವಾಸಿಗಳಿಗೆ ” ಸಂತೋಷದ ದಿನ” ಎಂದು ಬಣ್ಣಿಸಿದ ಕೆಲವೇ ದಿನಗಳಲ್ಲಿ, ನದಿಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ. PM2.5 ಮತ್ತು PM10 ಕಣಗಳು ಪ್ರಮುಖ ಮಾಲಿನ್ಯಕಾರಕಗಳಾಗಿ ಮುಂದುವರಿದಿದೆ. ನಗರದಾದ್ಯಂತ ಇರುವ ಮಾನಿಟರಿಂಗ್ ಕೇಂದ್ರಗಳಲ್ಲಿ ಸ್ಥಳೀಯ ವ್ಯತ್ಯಾಸಗಳು ಕಂಡುಬಂದಿದ್ದು, ಶ್ರೀನಿವಾಸಪುರಿಯು ಪಿಜಿಡಿಎವಿ ಕಾಲೇಜಿನಲ್ಲಿ ಸುಮಾರು 110 ರಷ್ಟು ಕಡಿಮೆ ಮಟ್ಟದ ಮಾಲಿನ್ಯ ದಾಖಲಾಗಿದೆ. ಅದೇ ಸಮಯದಲ್ಲಿ, ಇತರ ಹಲವು ಕೇಂದ್ರಗಳಲ್ಲಿ ಈ ಮಟ್ಟವು 118 ರಿಂದ 180 ಕ್ಕಿಂತ ಹೆಚ್ಚು ಇರುವುದು ಕಂಡುಬಂದಿದೆ.
ವಾಯು ಮಾಲಿನ್ಯವು ತೀವ್ರಗೊಂಡ ಹಿನ್ನಲೆಯಲ್ಲಿ, ಅದನ್ನು ನಿಯಂತ್ರಿಸಲು ʼವಾಯು ಗುಣಮಟ್ಟ ನಿರ್ವಹಣಾ ಆಯೋಗʼವು ಅಕ್ಟೋಬರ್ 21 ರಂದು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ʼಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ʼನ ಮೊದಲ ಹಂತವನ್ನು ಜಾರಿಗೆ ತಂದಿದೆ.
GRAP-1 ಅಡಿಯಲ್ಲಿ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬಯಲು ಪ್ರದೇಶಗಳಲ್ಲಿರುವ ತಿಂಡಿ ತಿನಿಸು ಮಾರಟ ಮಳಿಗೆಗಳಲ್ಲಿ ʼತಂದೂರ್ʼ ತಯಾರಿಕೆಗೆ ಕಲ್ಲಿದ್ದಲು ಮತ್ತು ಸೌದೆ ಬಳಕೆಯನ್ನು ನಿಷೇಧಿಸಲಾಗಿದೆ. ಅಲ್ಲದೆ, ಡೀಸೆಲ್ ಜನರೇಟರ್‌ಗಳ ಬಳಕೆಯನ್ನು ಕೇವಲ ಅತ್ಯಗತ್ಯ ಅಥವಾ ತುರ್ತು ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.















