ವಿಧಾನಸಬಾ ಚುನಾವಣೆ ನಡೆಯಲಿರುವ ಮತ್ತು ಹಿಮಪಾತವಾಗಿತ್ತಿರುವ ರಾಜ್ಯಗಳು ಹೊರತುಪಡಿಸಿ, 2027ರ ಜ.1ರಿಂದ ಫೆ.28ರವರೆಗೆ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಜನಗಣತಿ ನಡೆಯಲಿದೆ ಎಂದು ಜನಗಣತಿ ಆಯುಕ್ತ ಮೃತ್ಯುಂಜಯ ಕುಮಾರ್ ನಾರಾಯಣ ಶುಕ್ರವಾರ ಘೋಷಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಮಣಿಪುರ, ಗೋವಾ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ರಾಜ್ಯಗಳು ಮತ್ತು ಲಡಾಖ್, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ ಹಿಮಾವೃತವಾದ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2027ರ ಜ.25ರಿಂದ ಫೆ.28ರವರೆಗೆ ಜನಗಣತಿ ನಡೆಸಲಾಗುವುದು ಎಂದು ಅಧಿಸೂಚನೆ ತಿಳಿಸಿದೆ. ಜನಗಣತಿಯ ಪರಿಷ್ಕರಣಾ ಸುತ್ತು ಮಾ.1ರಿಂದ ಮಾ.5ರವರೆಗೆ ನಡೆಯಲಿದೆ. ಮನೆ-ಮನೆಗೆ ಜನಗಣತಿ ಪ್ರಾರಂಭವಾಗುವ ಸ್ವಲ್ಪ ಮೊದಲು, ಜ.10-24ರವರೆಗೆ ಸ್ವಯಂ ಗಣತಿಗೆ ಅವಕಾಶವಿರುತ್ತದೆ ಎಂದು ವರದಿಯಾಗಿದೆ.
ಭಾರತದ ಕೊನೆಯ ಜನಗಣತಿಯನ್ನು 2011ರಲ್ಲಿ ನಡೆಸಲಾಗಿತ್ತು. ಆಗಿನ ಜನಸಂಖ್ಯೆ 121 ಕೋಟಿ ಇತ್ತು. ಅದರಲ್ಲಿ 62.32 ಕೋಟಿ ಪುರುಷರು ಮತ್ತು 58.75 ಕೋಟಿ ಮಹಿಳೆಯರು ಸೇರಿದ್ದರು. ಆ ಸಮಯದಲ್ಲಿ ದೇಶದಲ್ಲಿ 24.95 ಕೋಟಿ ಕುಟುಂಬಗಳಿದ್ದವು. ನಂತರ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಸದ್ಯ ಈ ಪ್ರಕ್ರಿಯೆಗಾಗಿ ಕೇಂದ್ರ ಸಚಿವ ಸಂಪುಟವು 11,718 ಕೋಟಿ ರು.ಗಳನ್ನು ಮಂಜೂರು ಮಾಡಿದೆ ಎಂದು ಮೂಲಗಳು ಹೇಳಿವೆ.














