ವಾಷಿಂಗ್ಟನ್: ರಷ್ಯಾ ದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಭಾರಿ ಸುಂಕ ವಿಧಿಸಿ, ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ರಷ್ಯಾದಿಂದಲೇ ಡೀಸೆಲ್ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆಯು ಟ್ರಂಪ್ ಅವರ ದ್ವಂದ್ವ ನೀತಿ ಹಾಗೂ ಅಮೆರಿಕದ ನಿಲುವಿನಲ್ಲಿನ ವೈರುಧ್ಯದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ರಷ್ಯಾದಿಂದ ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಡೀಸೆಲ್ ಪೂರೈಕೆ ಮಾಡಿಕೊಳ್ಳುವ ಸಂಬಂಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದ ಮಾಡಿಕೊಂಡಿದ್ದಾರೆ. ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಅನಿಲ ಖರೀದಿಸುವ ದೇಶಗಳ ಮೇಲೆ ಭಾರಿ ಸುಂಕ ವಿಧಿಸಲು ಅಮೆರಿಕದ ಕಾಂಗ್ರೆಸ್ ಟ್ರಂಪ್ ಅವರಿಗೆ ಅಧಿಕಾರ ನೀಡಿದ ಕೆಲವೇ ವಾರಗಳಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ದೂರವಾಣಿ ಮಾತು ಕತೆ ನಡೆಸಿದ ಬಳಿಕ ಶುಕ್ರವಾರ ಟ್ರಂಪ್ ಈ ಒಪ್ಪಂದವನ್ನು ಘೋಷಿಸಿದ್ದಾರೆ. ಈ ನಿರ್ಧಾರಕ್ಕೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಡೆಮಾ ಕ್ರಟಿಕ್ ಪಕ್ಷದ ನಾಯಕರು ಹಾಗೂ ರಿಪಬ್ಲಿಕನ್ ಪಕ್ಷದ ಕೆಲ ನಾಯಕರಿಂದಲೂ ಟೀಕೆ ವ್ಯಕ್ತವಾಗಿದೆ.
ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಷಿಯಲ್’ ಜಾಲತಾಣದಲ್ಲಿ ಒಪ್ಪಂದದ ಬಗ್ಗೆ ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ ಅಮೆರಿಕದ ಹಣಕಾಸು ಇಲಾಖೆ, ಜಾಗತಿಕ ಮಾರುಕಟ್ಟೆಗೆ, ಅಮೆರಿಕಕ್ಕೂ ಸೇರಿ, ಡೀಸೆಲ್ ಪೂರೈಸುವ ರಷ್ಯಾದ ಮೇಲಿನ ನಿರ್ಬಂಧಗಳನ್ನು ಮುಂದಿನ ವರ್ಷದ ಏಪ್ರಿಲ್ 7ರವರೆಗೆ ಸಡಿಲಗೊಳಿಸಿದೆ.
ಅಮೆರಿಕವೇ ಇದೀಗ ರಷ್ಯಾದಿಂದ ಇಂಧನ ಖರೀದಿಸಲು ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬರುವ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಟ್ರಂಪ್ ಈ ಕ್ರಮ ಕೈಗೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ರಷ್ಯಾದ ತೈಲ ಮತ್ತು ಅನಿಲ ಖರೀದಿಸುವ ಪ್ರಮುಖ ದೇಶಗಳ ಮೇಲೆ ಸುಂಕ ವಿಧಿಸಲು ಟ್ರಂಪ್ ಅವರಿಗೆ ಅಧಿಕಾರ ನೀಡುವ ಕಾನೂನನ್ನು ಅಮೆರಿಕದ ಕಾಂಗ್ರೆಸ್ ಇತ್ತೀಚೆಗಷ್ಟೇ ಅಂಗೀಕರಿಸಿದೆ. ಹಾಗಾದರೆ, ಅಮೆರಿಕವೇ ರಷ್ಯಾದಿಂದ ಇಂಧನ ಖರೀದಿಸಿದರೆ ಅಮೆರಿಕದ ಮೇಲೆಯೇ ಸುಂಕ ವಿಧಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಅಮೆರಿಕದ ಸಂಶೋಧನಾ ಸಂಸ್ಥೆ ಕ್ಯಾಟೊ ಇನ್ಸ್ಟಿಟ್ಯೂಟ್ನ ಉಪಾಧ್ಯಕ್ಷ ಸ್ಕಾಟ್ ಲಿಂಕಿಕೋಮ್ ಈ ಬೆಳವಣಿಗೆಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. ‘ರಷ್ಯಾದ ತೈಲ ಮತ್ತು ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಮೇಲೆ ಸುಂಕ ವಿಧಿಸಲು ಟ್ರಂಪ್ ಅವರಿಗೆ ಅಧಿಕಾರ ನೀಡುವ ಕಾನೂನನ್ನು ಕಾಂಗ್ರೆಸ್ ಈಗಷ್ಟೇ ಅಂಗೀಕರಿಸಿದೆ. ಹಾಗಾದರೆ, ಅಮೆರಿಕವೇ ಅಮೆರಿಕದ ಮೇಲೆ ಸುಂಕ ವಿಧಿಸಬಹುದೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ರಷ್ಯಾದಿಂದ ಇಂಧನ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಭಾರತವನ್ನು ಟ್ರಂಪ್ ಹಾಗೂ ಅವರ ಅಧಿಕಾರಿಗಳು ತೀವ್ರವಾಗಿ ಟೀಕಿಸಿದ್ದ ಹಿನ್ನೆಲೆಯಲ್ಲಿ, ಇದೀಗ ರಷ್ಯಾದಿಂದಲೇ ಡೀಸೆಲ್ ಖರೀದಿಸಲು ಅಮೆರಿಕ ಮುಂದಾಗಿರುವುದು ದ್ವಂದ್ವನೀತಿಯ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಪರೋಕ್ಷವಾಗಿ ನೆರವು ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಟ್ರಂಪ್ ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚು ವರಿಯಾಗಿ ಶೇ. 25ರಷ್ಟು ಸುಂಕ ವಿಧಿಸಿದ್ದರು. ಇದರಿಂದ ಭಾರತದ ಉತ್ಪನ್ನಗಳ ಮೇಲಿನ ಒಟ್ಟು ಸುಂಕ ಶೇ. 50ಕ್ಕೆ ಏರಿಕೆಯಾಗಿತ್ತು.
ಈ ಕ್ರಮದ ಬಳಿಕ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದೀಗ ರಷ್ಯಾ ದಿಂದಲೇ ಇಂಧನ ಖರೀದಿಸಲು ಅಮೆರಿಕ ಒಪ್ಪಂದ ಮಾಡಿಕೊಂಡಿರುವುದು, ಭಾರತದ ವಿರುದ್ಧದ ಟ್ರಂಪ್ ಆಡಳಿತದ ನಿಲುವಿನ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ ಎಂದು ಹೇಳಲಾಗಿದೆ.











