ಹೊಸದಿಲ್ಲಿ: ಕೇಂದ್ರ ಸರ್ಕಾರ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಲ್ಲ ಎಂದು ಆದೇಶಿಸಿ ಒಂದು ದಿನ ಕಳೆಯುವಷ್ಟರಲ್ಲಿ, ‘ಕಾಕ್ರೋಚ್ ಜನತಾ ಪಾರ್ಟಿ’ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ನೇತೃತ್ವದ ತಂಡ ದಿಢೀರ್ ಪ್ರತಿಭಟನೆ ನಡೆಸಿದೆ. ಈ ನಾಯಕರು ನಿಷೇಧಿತ ಪ್ರದೇಶದ ಒಳಗೆ ನುಗ್ಗಲು ಕಬ್ಬಿಣದ ಗೇಟ್ ಹಾಗೂ ಪೊಲೀಸ್ ಬ್ಯಾರಿಕೇಡ್ಗಳನ್ನು ಹಾರಿ ಒಳಪ್ರವೇಶಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್ ಮೈದಾನದ ಆವರಣದೊಳಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋವನ್ನು ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಭಾರತ ಮಾತಾಕೀ ಜಯ್’ ಹಾಗೂ ‘ಇಂಕಿಲಾಬ್ ಜಿಂದಾಬಾದ್’ ಎಂದು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದುಕೊಂಡು ಗೇಟ್ ಹಾರಿ ಒಳಸಾಗಿದ ನಾಯಕರು, ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರೂ, ಧಿಕ್ಕಾರ ಕೂಗುತ್ತಾ ಆವರಣ ಪ್ರವೇಶಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಕೊನೆಗೆ ವಶಕ್ಕೆ ಪಡೆದರು .
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಅಭಿಜಿತ್ ದೀಪ್ಕೆ, “ಪ್ರತಿಭಟನಾ ಹಕ್ಕನ್ನು ಯಾರೂ ಅಮಾನತು ಗೊಳಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ. ಪ್ರತಿಭಟನಾ ಸ್ಥಳದ ಪಟ್ಟಿಯಿಂದ ಜಂತರ್ ಮಂತರ್ ಅನ್ನು ತೆಗೆದು ಹಾಕುವುದರಿಂದ ಪ್ರತಿಭಟನೆಗಳು ನಿಲ್ಲುವುದಿಲ್ಲ, ಬದಲಿಗೆ ದೇಶಾದ್ಯಂತ ಇಂತಹ ಸ್ಥಳಗಳು ತಲೆಯೆತ್ತಲಿವೆ ಎಂದು ಅವರು ಎಚ್ಚರಿಸಿದ್ದಾರೆ.











