ಕಳೆದ ಕೆಲವು ದಿನಗಳಿಂದ ಗಣೇಶ ಚತುರ್ಥಿಯ ವಿಷಯದಲ್ಲಿ ಸರ್ಕಾರಕ್ಕೂ ಪ್ರತಿಪಕ್ಷಗಳಿಗೂ ವಾಕ್ಸಮರ ಜೋರಾಗಿದೆ. ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರದು ಎಂದು ಪೊಲೀಸ್ ಅಧಿಕಾರಿಯ ಮಾತು ಎಲ್ಲೆಡೆ ವೈರಲ್ ಆಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಜೊತೆಗೆ ಸರ್ಕಾರದ ಕೆಲ ನಾಯಕರೂ ಮೆರವಣಿಗೆಯ ವಿಷಯದಲ್ಲಿ ಮೂಗು ತೂರಿಸಿ ಟೀಕೆಗೆ ಗುರಿಯಾಗಿದ್ದರು.
ಆದರೆ ಇದೆಲ್ಲವನ್ನು ಮೀರಿ ಇದೀಗ ಮೈಸೂರಿನ ಆರ್.ಎಸ್.ಎಸ್. ಕಛೇರಿಯಲ್ಲಿ ಅಪರೂಪದ ಘಟನೆಯೊಂದು ನಡೆದಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಮೈಸೂರಿನ ಮಾಧವ ಕೃಪಾ ಗಣೇಶೋತ್ಸವವನ್ನು ಇಬ್ಬರು ಮುಸ್ಲಿಂ ತಜ್ಞರು ಉದ್ಘಾಟಿಸುವ ಮೂಲಕ ಕೋಮು ಸೌಹಾರ್ದತೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿಗೆ ಸಾಕ್ಷಿಯಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೈಸೂರು ವಿಭಾಗದ ಕಚೇರಿ ‘ಮಾಧವ ಕೃಪಾ’ ಆವರಣದಲ್ಲಿ ಆಯೋಜಿಸಲಾದ ಈ ಗಣೇಶೋತ್ಸವ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಡಾ. ಖಾದರ್ ವಲ್ಲಿ (ಸಿರಿಧಾನ್ಯ ತಜ್ಞ) ಮತ್ತು ಡಾ. ಜಾವೇದ್ ನಯೀಮ್ ಜೊತೆಯಾಗಿ ಉದ್ಘಾಟಿಸಿದ್ದಾರೆ.
ಸಾಮಾನ್ಯವಾಗಿ ಹಿಂದುತ್ವ ಸಂಘಟನೆಗಳ ಹಿನ್ನೆಲೆಯುಳ್ಳ ಸ್ಥಳದಲ್ಲಿ ನಡೆಯುವ ಸಾಂಪ್ರದಾಯಿಕ ಉತ್ಸವಕ್ಕೆ ಮುಸ್ಲಿಂ ಸಮುದಾಯದ ಗಣ್ಯರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಉದ್ಘಾಟನೆ ಮಾಡಿಸಿರುವುದು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯದ ದೊಡ್ಡ ಸಂದೇಶವನ್ನು ಸಾರಿದೆ.
ಈ ಸಂದರ್ಭದಲ್ಲಿ ಪ್ರಸಿದ್ಧ ವಿಜ್ಞಾನಿ ಹಾಗೂ ಸಿರಿಧಾನ್ಯಗಳ ಮಹತ್ವವನ್ನು ಜಗತ್ತಿಗೆ ಸಾರಿದ ಡಾ. ಖಾದರ್ ವಲ್ಲಿ ಅವರು ಗಣೇಶ ಮೂರ್ತಿಯ ಪೂಜೆ ನೆರವೇರಿಸಿ ಹಬ್ಬಕ್ಕೆ ಚಾಲನೆ ನೀಡಿದ್ದಾರೆ.















