ಮಂಗಳೂರು : 2020ನೇ ಇಸವಿಯ ನವೆಂಬರ್ ತಿಂಗಳಲ್ಲಿ ಬೆಳಿಗ್ಗೆ ಸಮಯ ಸುಮಾರು 7.00 ಗಂಟೆಗೆ ಬಿಜಾರ ರಾಜುದ ಗೋವಿಂದ್ ಕುಮಾರ್ ಎನ್ನುವವರು ಮನೆಯಿಂದ ಕೆಲಸಕ್ಕೆಂದು ಹೊರಟು ಪಣಂಬೂರು ದೀಪಕ್ ಪೆಟ್ರೋಲ್ ಬಂಕ್ನ ಹಿಂಭಾಗ ಎನ್.ಎಮ್.ಪಿ.ಎ ಮುಖ್ಯ ಆಡಳಿತ ಕಛೇರಿಯ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಆರೋಪಿತರಾದ ಮಂಗಳೂರಿನ ಕೆಂಜಾರು ಬಳಿಯ ಜಾವೀದ್ ಆಖ್ತರ್ ಅಲಿಯಾಸ್ ಅಖ್ತರ್ (28) ಮತ್ತು ಕಸಬಾ ಬೇಂಗ್ರೆಯ ತೋಯಿದ್ ಖಾದರ್ ಯಾನೆ ತೋಯಿ (24) ಸೇರಿಕೊಂಡು ಸ್ಕೂಟರ್ ನಲ್ಲಿ ಬಂದು, ಗೋವಂದ್ ಕುಮಾರ್ ಅವರನ್ನು ಅಡ್ಡ ಹಾಕಿ ತಡೆದು ನಿಲ್ಲಿಸಿ, ಕಬ್ಬಿಣದ ರಾಡನ್ನು ತೋರಿಸಿ, ಸುಮಾರು 5000 ಮೌಲ್ಯದ ಮೊಬೈಲ್ ಪೋನನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ:56/2020 ಕಲಂ:392,397 ಜೊತೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಪಣಂಬೂರು ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಅಜ್ಮತ್ ಆಲಿರವರು ತನಿಖೆ ಕೈಗೊಂಡು ದಿನಾಂಕ:17.11.2020 ರಂದು ಆರೋಪಿಗಳನ್ನು ದಸ್ತಗಿರಿ ಮಾಡಿ , ಆರೋಪಿತರಿಂದ ಸೊತ್ತನ್ನು ಸ್ವಾಧೀನಪಡಿಸಿಕೊಂಡು, ಮಾನ್ಯ ಜೆ.ಎಮ್.ಎಫ್.ಸಿ -2 ನೇ ನ್ಯಾಯಾಲಯಕ್ಕೆ ಆರೋಪಿತರನ್ನು ಹಾಜರುಪಡಿಸಿರುತ್ತಾರೆ. ತನಿಖೆಯನ್ನು ಮುಂದುವರೆಸಿ, ಆರೋಪಿತರ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ನಂತರದಲ್ಲಿ ಮಾನ್ಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಭಾಗಶಃ ವಿಚಾರಣೆ ನಡೆದು, ನಂತರ ಪ್ರಕರಣವು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿ ಎಸ್ ಸಿ-1) ಕ್ಕೆ ವರ್ಗಾವಣೆಗೊಂಡು ಮಾನ್ಯ ನ್ಯಾಯಾಲಯದಲ್ಲಿ ಎಸ್.ಸಿ ನಂಬ್ರ 84/2021 ರಂತೆ ವಿಚಾರಣೆ ನಡೆದು ದಿನಾಂಕ 16.09.2026 ರಂದು ಮಾನ್ಯ ನ್ಯಾಯಾಧೀಶರಾದ ಮೋಹನ್ ಜೆ.ಎಸ್ ರವರು ಆರೋಪಿಗಳಿಗೆ ಕಲಂ:392 ಜೊತೆಗೆ 34 ಐಪಿಸಿ ಕಾಯ್ದೆ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಮತ್ತು 25,000 ದಂಡವನ್ನು ವಿಧಿಸಿರುತ್ತಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಭದರಿನಾಥ ನೈಯಾರಿರವರು ವಾದ ಮಂಡಿಸಿರುತ್ತಾರೆ.















