ಡಾ. ಶಿವರಾಮ ಕಾರಂತರು ಇಪ್ಪತ್ತನೆಯ ಶತಮಾನ ಕಂಡ ಬಹುಮುಖದ ವ್ಯಕ್ತಿತ್ವ. ಕಾದಂಬರಿಕಾರ, ಯಕ್ಷಗಾನ ಕಲಾವಿದ, ಪರಿಸರ ತಜ್ಞ ಹೀಗೆ ಹತ್ತಾರು ವಿಭಾಗಗಳಲ್ಲಿ ಗುರುತಿಸಿಕೊಂಡ ಮೇರು ಪ್ರತಿಭೆ.
ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ 1902, ಅಕ್ಟೋಬರ್ 10ರಂದು.ಕಾರಂತರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ಯವರೆಗೆ ನಡೆದು 1920ರಲ್ಲಿ ಕೊನೆ ಆಯಿತು. ತಮ್ಮ ವಿದ್ಯಾರ್ಥಿ ದೆಸೆಯಲ್ಲೆ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಕಾರಂತರು ತಮ್ಮ ಓದನ್ನು ಅಷ್ಟಕ್ಕೇ ನಿಲ್ಲಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಏಳು ದಶಕಗಳಲ್ಲಿ ಅಭಿವ್ಯಕ್ತಗೊಂಡ ಅವರ ಬದುಕು ಸಾಹಿತ್ಯ, ಸಾಮಾಜಿಕ ಜಾಗೃತಿ, ರಾಜಕೀಯ ಹೋರಾಟ, ಪರಿಸರ ಸಂರಕ್ಷಣೆ ಮುಂತಾದ ಹತ್ತು ಹಲವು ದಿಕ್ಕುಗಳಲ್ಲಿ ಪಸರಿಸಿದೆ.
ಇಂದು ಅವರ 125ನೇ ಜನ್ಮದಿನ. ಇದರ ಸವನೆನಿನೊಂದಿಗೆ ಕಾರಂತರ ಚಲನಚಿತ್ರದ ಕೆಲವೊಂದು ಮಾಹಿತಿಗಳು ಇಲ್ಲಿವೆ ನೋಡಿ..
ನಿರಂತರ ಪ್ರಯೋಗಶೀಲರಾಗಿದ್ದ ಸಾಹಿತಿ ಶಿವರಾಮ ಕಾರಂತರು ಮೂಕಿ ಚಿತ್ರಗಳ ನಿರ್ಮಾಣಕ್ಕೆ ಕೈಹಾಕಿದ್ದು ಮತ್ತೊಂದು ಸಾಹಸ. ಹರಿಜನರ ಬದುಕನ್ನು ಆಧರಿಸಿದ್ದ ‘ಡೊಮಿಂಗೋ’ (1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ‘ಭೂತರಾಜ್ಯ’ (1931) ಎಂಬ ಚಿತ್ರವನ್ನು ನಿರ್ಮಿಸಿದರು. ಕಾರಂತರ ಕೃತಿಗಳನ್ನು ಆಧರಿಸಿ ತಯಾರಾದ ಸಿನಿಮಾಗಳು – ಚೋಮನ ದುಡಿ (1975), ಚಿಗುರಿದ ಕನಸು (2003), ಬೆಟ್ಟದ ಜೀವ (2011), ಮೂಕಜ್ಜಿಯ ಕನಸುಗಳು (2019) ತಮ್ಮ ‘ಕುಡಿಯರ ಕೂಸು’ ಕೃತಿಯನ್ನು ಆಧರಿಸಿ ಸ್ವತಃ ಕಾರಂತರೇ ‘ಮಲೆಯ ಮಕ್ಕಳು’ (1978) ಚಿತ್ರವನ್ನು ನಿರ್ದೇಶಿಸಿದ್ದರು. ‘ಸೆಪ್ಟೆಂಬರ್ 8’ ತುಳು ಚಿತ್ರದಲ್ಲಿ ಅಭಿನಯಿಸಿದ್ದರು.
ಈ ಮೇಲಿನ ಮಾಹಿತಿಯನ್ನು ಡಾ.ಕೆ. ಪುಟ್ಟಸ್ವಾಮಿಯವರ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾಯಾನ ಕೃತಿಯಿಂದ ಆರಿಸಲಾಗಿದೆ.











