ನವದೆಹಲಿ: 2027ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ದೆಹಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ನೇಮಕ ಮಾಡಲಾಗಿದೆ.
ಹಿಂದಿನ ಆವೃತ್ತಿಯಲ್ಲಿ ಮುಖ್ಯ ಕೋಚ್ ಆಗಿದ್ದ ಹೇಮಂಗ್ ಬದಾನಿ ಅವರ ಸ್ಥಾನವನ್ನು ಗಂಗೂಲಿ ತುಂಬಲಿದ್ದಾರೆ. ಭಾರತ ತಂಡದ ಮಾಜಿ ನಾಯಕ ಗಂಗೂಲಿ ಅವರು, 2019ರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿದ್ದರು. ಕ್ಯಾಪಿಟಲ್ಸ್ ಪುರುಷರ ಮತ್ತು ಮಹಿಳೆಯರ ತಂಡಗಳ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ವರ್ಷ ದೆಹಲಿ ಕ್ಯಾಪಿಟಲ್ಸ್ನ ಎಸ್ಎ20 ತಂಡವಾದ ಪ್ರಿಟೋರಿಯಾ ಕ್ಯಾಪಿಟಲ್ಸ್ನ ಮುಖ್ಯ ತರಬೇತುದಾರರಾಗಿದ್ದರು.
‘ಐಪಿಎಲ್ನಲ್ಲಿ ಮುಖ್ಯ ತರಬೇತುದಾರನ ಪಾತ್ರವನ್ನು ವಹಿಸಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ದೆಹಲಿ ಕ್ಯಾಪಿಟಲ್ಸ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಫ್ರಾಂಚೈಸಿ ಹಾಗೂ ಹಲವು ವರ್ಷಗಳಿಂದ ನಿಕಟ ಸಂಬಂಧ ಹೊಂದಿರುವ ತಂಡವಾಗಿದೆ. ನಮ್ಮಲ್ಲಿ ಪ್ರತಿಭಾವಂತ ಆಟಗಾರರ ತಂಡವಿದೆ ಮತ್ತು ಇತ್ತೀಚಿನ ದಿನಗಳಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಹೊಸ ಋತುವಿನಲ್ಲಿ ತಂಡದೊಂದಿಗೆ ಕೆಲಸ ಮಾಡಲು ನಾನು ಕಾಯುತ್ತಿದ್ದೇನೆ’ ಎಂದು ಗಂಗೂಲಿ ಹೇಳಿದ್ದಾರೆ.
‘ದಾದಾ ಯಾವಾಗಲೂ ದೆಹಲಿ ಕ್ಯಾಪಿಟಲ್ಸ್ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಅವರು ಈಗ ದೆಹಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ಬರುತ್ತಿದ್ದಾರೆ ಎಂದು ಘೋಷಿಸಲು ನನಗೆ ಹೆಮ್ಮೆ ಮತ್ತು ಗೌರವ ಎನಿಸುತ್ತಿದೆ. ಅವರ ಮಾರ್ಗದರ್ಶನದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಟ್ರೋಫಿ ಗೆಲ್ಲುತ್ತದೆ ಎಂಬ ಭರವಸೆ ನನಗಿದೆ’ ಎಂದು ದೆಹಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಮತ್ತು ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ ಸಂಸ್ಥಾಪಕ ಪಾರ್ಥ್ ಜಿಂದಾಲ್ ಹೇಳಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ತಂಡವು ಕಳೆದ ಎರಡು ಋತುಗಳಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ದೆಹಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಹೈ-ಪ್ರೊಫೈಲ್ ಆಟಗಾರರ ಟ್ರೇಡ್ ನಂತರ ಮಾಜಿ ನಾಯಕ ರಿಷಭ್ ಪಂತ್ ಮತ್ತೆ ದೆಹಲಿ ಫ್ರಾಂಚೈಸಿಗೆ ಮರಳಿದ್ದಾರೆ. ಈ ಟ್ರೇಡ್ನ ಭಾಗವಾಗಿ ಸ್ಪಿನ್ನರ್ ಕುಲದೀಪ್ ಯಾದವ್ ಲಖನೌ ತಂಡವನ್ನು ಸೇರಲಿದ್ದಾರೆ ಎಂದು ಜಾಲತಾಣದ ವರದಿಗಳು ದೃಢಪಡಿಸಿವೆ.











