ನವದೆಹಲಿ : ನ.1ರಂದು ಭಾನುವಾರ ಚಾಲನೆ ಪಡೆದುಕೊಂಡಿರುವ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಈ ಮಾರ್ಗದ ಅತ್ಯಂತ ವೇಗದ ಹಾಗೂ ನವೀನ ಸೌಲಭ್ಯಗಳನ್ನು ಹೊಂದಿರುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದು ಪ್ರಯಾಣಿಕರ ಜೇಬಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲಿನ ಎಸಿ 3-ಟೈರ್ ದರವು ಈ ಮಾರ್ಗದಲ್ಲಿ ಸಂಚರಿಸುವ ಇತರ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಶೇ.60ರಿಂದ 96ರಷ್ಟು ದುಬಾರಿಯಾಗಿದೆ. ಅದೇ ರೀತಿ, ಎಸಿ 2-ಟೈರ್ ದರವು ಶೇ.65ರಿಂದ 78ರಷ್ಟು ಹಾಗೂ ಎಸಿ 1-ಟಯರ್ ದರವು ಶೇ.20ರಿಂದ 30ರಷ್ಟು ಹೆಚ್ಚಾಗಿದೆ. ನೂತನ ರೈಲಿನ ಟಿಕೆಟ್ ದರವನ್ನು, ಎಸಿ 3-ಟೈರ್ಗೆ 2,810 ರು, ಎಸಿ 2-ಟಯರ್ಗೆ 3,630 ರು. ಹಾಗೂ ಎಸಿ 1-ಟೈರ್ಗೆ 4,450 ರು. ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ ಈ ಮಾರ್ಗದಲ್ಲಿ ಚಲಿಸುವ ಕೊಯಮತ್ತೂರು-ಮುಂಬೈ ಎಲ್ಟಿಟಿ ಎಕ್ಸ್ಪ್ರೆಸ್ನ ಎಸಿ 3, ಎಸಿ 2 ಮತ್ತು ಎಸಿ 1 ಟಯರ್ ದರಗಳು ಕ್ರಮವಾಗಿ 1,435 ರು., 2,045 ರು. ಮತ್ತು 3,425 ರು. ಇವೆ. ಇನ್ನು ಅಜ್ಮೇರ್ ಎಕ್ಸ್ಪ್ರೆಸ್ನ ದರಗಳು 1,510 ರು., 2,155 ರು. ಮತ್ತು 3,610 ರು. ಇವೆ. ಪ್ರೀಮಿಯಂ ಎಂದು ಪರಿಗಣಿಸಲಾದ ಹಮ್ಸಫರ್ ಎಕ್ಸ್ಪ್ರೆಸ್ನ ಎಸಿ 3 ದರಕ್ಕಿಂತಲೂ (1,725 ರು.) ವಂದೇ ಭಾರತ್ ಸ್ಲೀಪರ್ನ ಎಸಿ 3 ದರವು ಶೇ.63ರಷ್ಟು ಹೆಚ್ಚಾಗಿದೆ ಎಂದು ಜಾಲತಾಣ ಮೂಲಗಳು ವರದಿಯಲ್ಲಿ ದೃಢಪಡಿಸಿವೆ.















