ಅಫ್ಘಾನಿಸ್ತಾನದಲ್ಲಿ ಅತಿಯಾದ ಬಡತನ ಮತ್ತು ಕೌಟುಂಬಿಕ ಸವಾಲುಗಳ ನಡುವೆ ವಾಸಿಸುತ್ತಿರುವ ಮೊಹಮ್ಮದ್ ಸಾದಿಕ್ ಎಂಬ ವ್ಯಕ್ತಿಯ ಕಥೆಯೊಂದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. 4 ಮಂದಿ ಪತ್ನಿಯರನ್ನು ಹೊಂದಿರುವ ಈತನಿಗೆ ಒಟ್ಟು 70ಕ್ಕಿಂತ ಹೆಚ್ಚು ಮಕ್ಕಳು ಜನಿಸಿದ್ದು, ಪ್ರಸ್ತುತ 58 ಮಕ್ಕಳು ಜೀವಂತವಾಗಿದ್ದಾರೆ. ಅವರಲ್ಲಿ ಕಿರಿಯ ಮಗುವಿಗೆ ಕೇವಲ 3 ತಿಂಗಳು. ಆದರೆ ಬೃಹತ್ ಕುಟುಂಬವನ್ನು ಸಾಕಲು ಪರದಾಡುತ್ತಿರುವ ಈ ತಂದೆಗೆ ತಮ್ಮ ಎಲ್ಲ ಮಕ್ಕಳ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.
ಬಿಬಿಸಿ ಜಾಗತಿಕ ಮಹಿಳಾ ವರದಿಗಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾದಿಕ್, “ನನ್ನ ಎಲ್ಲ ಮಕ್ಕಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ನನಗೆ ಕಷ್ಟ. ಹೆಚ್ಚಿನ ಸಮಯದಲ್ಲಿ ನಾನು ಪ್ರೀತಿಯಿಂದ ಅವರನ್ನು ‘ಮಗನೇ’ ಅಥವಾ ‘ಮಗುವೇ’ ಎಂದೇ ಕರೆಯುತ್ತೇನೆ” ಎಂದು ತಮ್ಮ ಸ್ಥಿತಿಯನ್ನು ತೋಡಿಕೊಂಡಿದ್ದಾರೆ. ತಂದೆಯಾಗಿ ತಮ್ಮ ಮಕ್ಕಳ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದೆ ಇರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಕಾರು ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುವ ಸಾದಿಕ್, ತಾವು ಮಾರಾಟ ಮಾಡುವ ಪ್ರತಿಯೊಂದು ಕಾರಿಗೆ ಸುಮಾರು 1,000 ಅಫ್ಘಾನಿ (ಅಂದಾಜು 15 ಡಾಲರ್) ಕಮಿಷನ್ ಪಡೆಯುತ್ತಾರೆ. ಇದೊಂದೇ ಅವರ ಕುಟುಂಬದ ಜೀವನೋಪಾಯದ ಮೂಲವಾಗಿದೆ. ಸೂಕ್ತ ಬಾಗಿಲು-ಕಿಟಕಿಗಳಿಲ್ಲದ ಮಣ್ಣಿನ ಮನೆಯಲ್ಲಿ ಈ ಕುಟುಂಬ ವಾಸಿಸುತ್ತಿದ್ದು, ಚಳಿಗೆ ತೆಳುವಾದ ಪರದೆಗಳೇ ರಕ್ಷಣೆಯಾಗಿವೆ. ಅಡುಗೆ ಮಾಡಲು ಸೌದೆ ಕೊಳ್ಳಲು ಹಣವಿಲ್ಲದೆ ಕಾಗದಗಳನ್ನು ಸುಟ್ಟು ಅಡುಗೆ ಮಾಡುವ ಪರಿಸ್ಥಿತಿಯಿದೆ. ಪರಿಣಾಮವಾಗಿ, ಮಕ್ಕಳು ಹಲವು ಬಾರಿ ಖಾಲಿ ಹೊಟ್ಟೆಯಲ್ಲಿ ಮಲಗಬೇಕಾದ ಹಾಗೂ ಚಪ್ಪಲಿಯಿಲ್ಲದೆ ಬರಿಗಾಲಿನಲ್ಲಿ ಓಡಾಡಬೇಕಾದದು ಸ್ಥಿತಿ ನಿರ್ಮಾಣವಾಗಿದೆ.
ತಮ್ಮ 4 ಪತ್ನಿಯರನ್ನು ಸಣ್ಣ ವಯಸ್ಸಿನಲ್ಲೇ ವಿವಾಹವಾಗಿದ್ದಾಗಿ ತಿಳಿಸಿದ ಸಾದಿಕ್, ತಾಯಂದಿರು ತೀರಾ ಚಿಕ್ಕವರಾಗಿದ್ದರಿಂದ ಹಾಗೂ ಮಗುವಿನ ರಕ್ಷಣೆ, ಹಾಲುಣಿಸುವಿಕೆ ಮತ್ತು ಆರೈಕೆಯ ಅನುಭವವಿಲ್ಲದ ಕಾರಣ ಹಲವು ಮಕ್ಕಳು ಶೈಶವಾವಸ್ಥೆಯಲ್ಲೇ ಅಸುನೀಗಿದರು ಎಂದು ಹೇಳಿದ್ದಾರೆ. ಕ್ಷಯರೋಗ, ಕೆಮ್ಮು ಮತ್ತು ದಡಾರ ಮುಂತಾದ ಕಾಯಿಲೆಗಳಿಂದಲೂ ಕೆಲವು ಮಕ್ಕಳು ಸಾವನ್ನಪ್ಪಿದ್ದಾರೆ.














