ನವೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಬಿಟ್ಟು ಇನ್ಯಾವುದೇ ಭಾಷೆಯ ಸಿನಿಮಾಗಳ ಪ್ರದರ್ಶನ ಮಾಡುವಂತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶವೊಂದನ್ನು ಹೊರಡಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಕರವೇ ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿ, ನಮ್ಮ ರಾಜ್ಯದ ಭಾಷೆ ಕನ್ನಡ. ನಮ್ಮ ತಾಯಿಭಾಷೆಗಾಗಿ ಒಂದು ತಿಂಗಳು ಮುಡಿಪಿಡೋಣ, ರಾಜ್ಯದ ಚಿತ್ರಮಂದಿರಗಳಲ್ಲಿ ಒಂದು ತಿಂಗಳು ಬರೀ ಕನ್ನಡ ಸಿನಿಮಾಗಳಿಗೆ ಮಾತ್ರ ಅವಕಾಶ ಕೊಡಬೇಕು. ಇದರಿಂದ ಕನ್ನಡ ಚಿತ್ರರಂಗಕ್ಕೂ ಒಳಿತಾಗುತ್ತದೆ ಎಂದು ಹೇಳಿದ್ದಾರೆ. ನವೆಂಬರ್ ಒಂದರಂದು ಕೂಡ ಅನ್ಯಭಾಷೆಯ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಇದನ್ನು ತಪ್ಪಿಸಬೇಕು. ಕನ್ನಡ ರಾಜ್ಯೋತ್ಸವಕ್ಕೆ ಅವಮಾನ ಆಗಲು ಬಿಡಬಾರದು. ಈಗಾಗಲೇ ಚಿತ್ರಮಂದಿರಕ್ಕೆ ಎಚ್ಚರಿಕೆ ನೀಡಿದ್ದೇವೆ. ಸರ್ಕಾರವೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದರೆ ಎಲ್ಲರೂ ಅದನ್ನು ಪಾಲಿಸಲಿದ್ದಾರೆ ಎಂದಿದ್ದಾರೆ.













