ತುಳು ರಾಜ್ಯ ಭಾಷೆಯಾಗಿ ಅನುಮೋದನೆಗೆ ಮುಹೂರ್ತ ಫಿಕ್ಸ್;‌ ಕರಾವಳಿಯ ಕ್ಯಾಬಿನೆಟ್‌ನಲ್ಲಿ ಘೋಷಣೆಯೊಂದೇ ಬಾಕಿ!

ಸುಮಾರು 2600 ವರ್ಷಗಳ ಇತಿಹಾಸವುಳ್ಳ ತುಳು ಭಾಷೆಗೆ ಕರ್ನಾಟಕದಲ್ಲಿ ಅಧಿಕೃತ ಸ್ಥಾನಮಾನ ಸಿಗಬೇಕೆಂಬುದು ತುಳುನಾಡಿನ ಜನರ ಹಲವು ವರ್ಷಗಳ ಕನಸು. ಇದಕ್ಕಾಗಿ ಹಿಂದೆಯೇ ಕಯ್ಯಾರ ಕಿಂಞಣ್ಣ ರೈಗಳಿಂದ ಹಿಡಿದು ಇತ್ತೀಚೆಗೆ ನಡೆದ ಡಿಜಿಟಲ್‌ ಅಭಿಯಾನದವರೆಗೆ ಶಾಸಕ, ಸಂಸದರ ಸಮ್ಮುಖದಲ್ಲಿಯೂ ಹಲವಾರು ಹೋರಾಟಗಳು ನಡೆಯುತ್ತಾ ಬಂದಿದೆ. ಇದೀಗ ರಾಜ್ಯ ಸರ್ಕಾರ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ಸಿಗುವ ಎಲ್ಲಾ ಲಕ್ಷಣಗಳು ತೋರುತ್ತಿದೆ.

Advertisement

ಈ ಹಿಂದಿನ ವರದಿಗಳನ್ನು ಗಮನಿಸಿದರೆ 2013ಕ್ಕೂ ಮೊದಲು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಹೋರಾಟ ನಡೆದಿತ್ತಾದರೂ ತದನಂತರ ತುಳುವರ ಸಮಯೋಚಿತ ಮತ್ತು ದೂರದೃಷ್ಟಿಯ ಚಿಂತನೆಯ ಪ್ರಕಾರ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಲುವಾಗಿ ಬಹುದೊಡ್ಡ ಹೋರಾಟಗಳು ನಡೆದು ತುಳುವರ ಒಗ್ಗಟ್ಟಿನ ಪ್ರತೀಕವಾಗಿ ಆಗಿನ ಸರಕಾರವು ವರದಿಗಳನ್ನು ನೀಡುವಂತೆ ಕೇಳಿತ್ತು.

Advertisement
Advertisement

ನಂತರ ನಡೆದ ಬೆಳವಣಿಗೆಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಎರಡನೇ ಅಧಿಕೃತ ಭಾಷೆಯಾಗಿ ತುಳು ಘೋಷಿಸುವ ಸಲುವಾಗಿ ಮೋಹನ ಆಳ್ವ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ತುಳುವಿನ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ, ಸಂಸ್ಕೃತಿ ಹಾಗೂ ಶಾಸನಗಳ ಕುರಿತು ಸಮಿತಿ ಅಧ್ಯಯನ ನಡೆಸಿ ವರದಿ ನೀಡಲಾಗಿತ್ತಾದರೂ ತುಳುವರ ಕನಸು ಈಡೇರಲಿಲ್ಲ. ಇನ್ನು ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಸಂವಿಧಾನದ 8ನೇ ಅನುಸೂಚಿಗೆ ಸೇರಿಸಲು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲೂ ಬೃಹತ್‌ ಡಿಜಿಟಲ್‌ ಅಭಿಯಾನಗಳು ನಡೆದಿದ್ದವು.

ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಸಮ್ಮುಖದಲ್ಲಿ ಅಧ್ಯಯನ ತಂಡವನ್ನು ರಚಿಸಿ ಆಂಧ್ರಪ್ರದೇಶದಲ್ಲಿ ಈ ಹಿಂದೆ ನೀಡಿದ್ದ ಸ್ಥಳೀಯ ಭಾಷೆಗೆ ಕೊಟ್ಟ ಸ್ಥಾನಮಾನದ ವರದಿಯನ್ನು ತರಿಸಿಕೊಂಡು ಸರ್ಕಾರದ ಮುಂದೆ ತುಳುನಾಡಿನ ಪರವಾಗಿ ಬೇಡಿಯನ್ನಿಟ್ಟಿದ್ದರು.

ಪ್ರಸ್ತುತ ಸರ್ಕಾರದ ಅಧಿವೇಶನದಲ್ಲಿ ತುಳುನಾಡಿನ ಶಾಸಕರುಗಳು ಪಕ್ಷಾತೀತವಾಗಿ ತುಳುವಿನಲ್ಲಿಯೇ ಸ್ಪೀಕರ್‌ ಜೊತೆ ಸಂವಹನ ನಡೆಸಿ ಮೌಖಿಕ ಬೆಂಬಲ ನೀಡಿದ್ದಾರೆ

ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ‌ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲೇ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ.
ಇನ್ನುಳಿದಂತೆ ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ತುಳುವರ ಕರ್ಮಭೂಮಿ. ಈ ಭಾಷೆಗೆ ದೊಡ್ಡ ಇತಿಹಾಸವಿದ್ದು ತುಳು ಭಾಷಿಗರು ದೇಶ ಹಾಗೂ ವಿದೇಶದಲ್ಲೂ ವಾಸಿಸುತ್ತಿದ್ದು ತುಳುವರ ಜನಸಂಖ್ಯೆ ಕೋಟಿಗೂ ಅಧಿಕವಿದೆ.
ಈ ಘೋಷಣೆಯಿಂದ ಆಡಳಿತಾತ್ಮಕವಾಗಿ ತುಳುವರ ಮಾತೃ ಭಾಷೆಯು ವ್ಯಾವಹಾರಿಕ ಭಾಷೆಯಾಗಿ ಪರಿವರ್ತನೆಗೊಳ್ಳಲಿದೆ. ಮುಂದೆ ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಲು ಕೇಂದ್ರ ಸರ್ಕಾರವನ್ನು ಸ್ಥಳೀಯ ಸಂಸದರಾದ ಕ್ಯಾ. ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಸರಗೋಡಿನ ಸಂಸದರು ಧ್ವನಿಯಾಗುವಂತೆ ತುಳುವರ ಬೇಡಿಕೆಯಿದೆ.

ಇಂತಹ ಐತಿಹಾಸಿಕ ತುಳುವಿಗೆ ಸರ್ಕಾರದ ಮೂಲಗಳ ಪ್ರಕಾರ ಇದೀಗ ಸೂಕ್ತ ಅನುಮೋದನೆ ದೊರಕುತ್ತದೆ ಎಂದು ಹೇಳಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page