ಮುಂಬಯಿ: ʼರಾಮಾಯಣʼ ಭಾರತದ ಬಿಗ್ ಬಜೆಟ್ ಸಿನಿಮಾಗಳಲ್ಲೊಂದು. ಈ ವರ್ಷ ಸಿನಿಮಾದ ಮೊದಲ ಭಾಗ ತೆರೆ ಕಾಣುವುದು ಖಚಿತವಾಗಿದೆ. ಪೌರಾಣಿಕ ಇತಿಹಾಸವನ್ನು ದೃಶ್ಯ ರೂಪಕ್ಕೆ ತರಲು ಕಳೆದ ಕೆಲ ವರ್ಷಗಳಿಂದ ದೇಶ-ವಿದೇಶದ ನಾನಾ ಸಂಸ್ಥೆಗಳೊಂದಿಗೆ ನಿರ್ಮಾಪಕರು – ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ.
ಟೀಸರ್, ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಬರಲಿದೆ ಎನ್ನುವುದರ ತುಣುಕನ್ನು ಚಿತ್ರತಂಡ ಈಗಾಗಲೇ ತೋರಿಸಿದೆ. ಇತ್ತೀಚೆಗೆ ಗಣೇಶ ಹಬ್ಬದ ವಿಶೇಷವಾಗಿ ʼರಾಮಾಯಣʼ ಚಿತ್ರದ ಮೊದಲ ಹಾಡು ʼಜೈ ಜೈ ರಾಮ್ʼ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಶ್ರೀ ರಾಮನಾಗಿ ರಣ್‌ಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅವರ ಲುಕ್ಸ್ ಗಮನ ಸೆಳೆದಿದೆ.
ಈ ಹಾಡಿಗೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದು, ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಘೋಷಲ್ ತಮ್ಮ ಧ್ವನಿಯ ಮೂಲಕ ಜೀವ ತುಂಬಿದ್ದಾರೆ. ಹಾಡು ರಿಲೀಸ್ ಆಗಿ ಮಿಲಿಯನ್ ವೀಕ್ಷಣೆ ಕಾಣುತ್ತಿದ್ದು, ಹಾಡು ರೆಕಾರ್ಡ್ ಮಾಡುವ ವೇಳೆ ಅರಿಜಿತ್ ಸಿಂಗ್ ಅವರಿಗೆ ಎದುರಾದ ಒಂದು ವಿಶೇಷ ಸಂಗತಿ ಬಹಿರಂಗವಾಗಿದೆ. ʼರಾಮಾಯಣʼ ದ ಈ ಹಾಡನ್ನು ಹಾಡುವ ವೇಲೆ ಅರಿಜಿತ್ ಸಂಪೂರ್ಣವಾಗಿ ಭಕ್ತಿಯಲ್ಲಿ ಲೀನರಾಗಿದ್ದರು. ಇದರಿಂದ ಅವರು ಸುಮಾರು 200 ಟೇಕ್ ಗಳನ್ನು ತೆಗೆದುಕೊಂಡಿದ್ದರು ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
“ಅರಿಜಿತ್ ಸಿಂಗ್ ಅವರು ʼಜೈ ಜೈ ರಾಮ್ʼ ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ಭಕ್ತಿಯ ಭಾವದಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದರು; ಇದರ ಪರಿಣಾಮವಾಗಿ ಸುಮಾರು ಟೇಕ್ ತೆಗೆದುಕೊಳ್ಳಬೇಕಾಯಿತು. ಪ್ರತಿ ಬಾರಿಯೂ ಅವರು ಆ ಭಾವನೆಯ ಆಳವನ್ನು ಅರಿಯಲು ಪ್ರಯತ್ತಿಸುತ್ತಿದ್ದರು ಮತ್ತು ಆ ಭಾವದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ಆ ಪ್ರಕ್ರಿಯೆ ಮುಗಿಯಬಾರದೆಂದೇ ಅವರು ಬಯಸಿದ್ದರು. ಅಂತಿಮವಾಗಿ ಅವರು ತಾಂತ್ರಿಕ ಅಂಶಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು, ಸಂಪೂರ್ಣವಾಗಿ ಹಾಡಿನ ಭಾವನೆಗೆ ತಮ್ಮನ್ನುತಾವು ಒಪ್ಪಿಸಿಕೊಂಡರು.” ಎಂದು ವರದಿ ತಿಳಿಸಿದೆ.













