ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡಗೆ ಜೈಲಿನಲ್ಲಿ ಕಿರುಕುಳದ ಆರೋಪ ಕೇಳಿ ಬಂದಿದೆ. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರ ಪರ ವಕೀಲರು ಸ್ಪೋಟಕ ವಿಚಾರಗಳನ್ನ ಹೊರ ತಂದಿದ್ದಾರೆ.
ವಕೀಲರ ಪ್ರಕಾರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ ಪವಿತ್ರಾಗೌಡಗೆ ಜೀವ ಬೆದರಿಕೆ ಹಾಕಲಾಗುತ್ತಿದೆಯಂತೆ. ಕಳೆದ ಕೆಲ ತಿಂಗಳಿಂದ ಪವಿತ್ರಾಗೌಡ 30 ಮಂದಿ ಕೈದಿಗಳಿರುವ ಬ್ಯಾರಕ್ ನಲ್ಲಿದ್ದಾರೆ. ಇದೇ ಬ್ಯಾರಕ್ ನಲ್ಲಿ ನೈಜೀರಿಯಾ ಮೂಲದ ಆರೋಪಿಗಳು ಸಹ ಇದ್ದು, ಪವಿತ್ರಾಗೌಡಗೆ ಜೀವ ಬೆದರಿಕೆ ಹಾಕುತ್ತಿದ್ದಾರಂತೆ. ಪ್ರಕರಣ ಸಂಬಂಧ ಪವಿತ್ರಾಗೌಡ ಪರ ವಕೀಲರು ಜೈಲಿನಲ್ಲಿ ಭೇಟಿಗೆ ತೆರಳಿದ್ದ ವೇಳೆ ಜೈಲಿನ ವ್ಯವಸ್ಥೆ ಬಗ್ಗೆ ಬೇಸತ್ತು ತೊಟ್ಟು ವಿಷ ಕೊಡಿ ಅಂತಿದ್ದಾರೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು.
ರೇಣುಕಾಸ್ವಾಮಿ ಕೊಲೆ ಸಂಬಂಧ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇಂದು 59ನೇ ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಪವಿತ್ರಾಗೌಡ ಪರವಾಗಿ ಹಿರಿಯ ವಕೀಲ ಬಾಲನ್ ಹಾಗೂ ನಾರಾಯಣಸ್ವಾಮಿ ವಾದ ಮಂಡಿಸಿದರು. ಈ ವೇಳೆ ಜೈಲಿನಲ್ಲಿ ಪವಿತ್ರಾಗೌಡಗೆ ನೀಡುತ್ತಿರುವ ಕಿರುಕುಳ ಬಗ್ಗೆ ವಕೀಲರು ಕೋರ್ಟ್ ಗಮನಕ್ಕೆ ತಂದರು. ಪವಿತ್ರಾಗೌಡಗೆ ಪ್ರತ್ಯೇಕ ಬ್ಯಾರಕ್ ಪ್ರತ್ಯೇಕವಾದ ಬ್ಯಾರಕ್ ಕೇಳಲಾಗಿತ್ತು. ಕೋರ್ಟ್ ಸೂಚನೆ ಬಳಿಕ ಅಧಿಕಾರಿಗಳು ನೈಜೀರಿಯಾ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ನೈಜೀರಿಯಾ ಆರೋಪಿಗಳು ಪವಿತ್ರಗೌಡಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಕೀಲರು ವಾದಿಸಿದರು.
ವಿಡಿಯೋ ಕಾನ್ಫರೆನ್ಸ್ ವೇಳೆ ಪವಿತ್ರಾಗೌಡ ಭಾವುಕರಾದರು. ದಯಮಾಡಿ ಪ್ರತ್ಯೇಕ ಬ್ಯಾರಕ್ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದರು. ಪವಿತ್ರಾಗೌಡ ಮನವಿ ಹಿನ್ನೆಲೆ, ಜೈಲಾಧಿಕಾರಿಗಳಿಗೆ ವರದಿ ನೀಡಲು ಕೋರ್ಟ್ ಸೂಚನೆ ನೀಡಿದ್ದು, ವರದಿ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಕೋರ್ಟ್ ಹೇಳಿತು.
ಅಲ್ಲದೇ ಪವಿತ್ರಾಗೌಡ ಪರ ವಕೀಲ ನಾರಾಯಣ ಸ್ವಾಮಿ ವಾದ ಮುಂದುವರಿಸಿ ಪವಿತ್ರಾಗೌಡ ಭೇಟಿ ಮಾಡಲು ಹೋದರೆ, ಈ ಹಿಂಸೆ ತಡೆಯಲು ಆಗ್ತಾ ಇಲ್ಲ. ಅಧಿಕಾರಿಗಳು ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ, ಈ ಸಮಸ್ಯೆಗಳನ್ನು ಭರಿಸಲು ಸಾಧ್ಯವಾಗ್ತಿಲ್ಲ ಎಂದು ಕಣ್ಣೀರು ಹಾಕುತ್ತಾರೆ. ಅವರಿಂದ ಒಂದು ಪತ್ರ ನೀಡಲು ಅವಕಾಶ ನೀಡಿ ಎಂದು ವಕೀಲ ನಾರಾಯಣ ಸ್ವಾಮಿ ಮನವಿ ಮಾಡಿದರು. ವಾದ ಆಲಿಸಿದ ಕೋರ್ಟ್ ವಿಚಾರಣೆ ಮುಂದೂಡಿದೆ.













