ವಾಷಿಂಗ್ಟನ್: ಭಾರತದ ಪ್ರಮುಖ ಕೈಗಾರಿಕಾ ಸಮೂಹವಾದ ಎಸ್ಸಾರ್ ಗ್ರೂಪ್ ಅಮೆರಿಕದಲ್ಲಿ 18 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದೆ. ಇದರ ಭಾಗವಾಗಿ ಅಮೆರಿಕದ ಐಯೋವಾ ರಾಜ್ಯದಲ್ಲಿ 15 ಬಿಲಿಯನ್ ಡಾಲರ್ ವೆಚ್ಚದಲ್ಲಿ ಬೃಹತ್ ಉಕ್ಕಿನ ಕಾರ್ಖಾನೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತ ಭವನದ ಓವಲ್ ಕಚೇರಿಯಲ್ಲಿ ಎಸ್ಸಾರ್ ಸಂಸ್ಥೆಯ ಮಾಲೀಕರಾದ ರುಯಾ ಕುಟುಂಬದ ಸಮ್ಮುಖದಲ್ಲಿ ಟ್ರಂಪ್ ಈ ವಿಷಯವನ್ನು ಪ್ರಕಟಿಸಿದರು. ಎಸ್ಸಾರ್ ಸಂಸ್ಥೆ ಅಮೆರಿಕದ ಅಂಗ ಸಂಸ್ಥೆಯಾದ ಮೆಸಾಬಿ ಮೆಟಾಲಿಕ್ಸ್ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಮಿನ್ನೇಸೋಟದಲ್ಲಿರುವ ಸಂಸ್ಥೆಯ ಸ್ವಂತ ಗಣಿಗಳಿಂದ ಕಬ್ಬಿಣದ ಅದಿರನ್ನು ತಂದು, ಈ ನೂತನ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದಿಸಲಾಗುತ್ತದೆ. ಇದು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉಕ್ಕಿನ ಕಾರ್ಖಾನೆಯಾಗಲಿದೆ ಎಂದು ಟ್ರಂಪ್ ವಿವರಿಸಿದ್ದಾರೆ.
ಈ ಕಾರ್ಖಾನೆಯ ಉತ್ಪಾದನೆಯು 2030 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ತೊಡಗಿದಾಗ ವಾರ್ಷಿಕ 10 ಮಿಲಿಯನ್ ಟನ್ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ವಿದೇಶಿ ಉಕ್ಕಿನ ಆಮದಿನ ಮೇಲೆ ತಾವು ವಿಧಿಸಿದ 50 ಪ್ರತಿಶತ ಸುಂಕದ ನಿರ್ಧಾರದಿಂದಾಗಿ ಅಮೆರಿಕದ ಉಕ್ಕು ಉದ್ದಿಮೆ ಮತ್ತೆ ಚೇತರಿಸಿಕೊಳ್ಳುತ್ತಿದೆ ಮತ್ತು ವಿದೇಶಿ ಸುಂಕ ತಪ್ಪಿಸಲು ಕಂಪನಿಗಳು ಅಮೆರಿಕದಲ್ಲೇ ಕಾರ್ಖಾನೆಗಳನ್ನು ಸ್ಥಾಪಿಸುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೆಸಾಬಿ ಮೆಟಾಲಿಕ್ಸ್ ಅಧ್ಯಕ್ಷ ರೇವಂತ್ ರುಯಾ , ಅಮೆರಿಕದಲ್ಲಿ ಉತ್ಪಾದನೆಗೆ ಆದ್ಯತೆ ನೀಡಿದ್ದಕ್ಕಾಗಿ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಯೋಜನೆಯು ಅಮೆರಿಕದ ರಕ್ಷಣೆ, ವಾಹನ ತಯಾರಿಕೆ, ಹಡಗು ನಿರ್ಮಾಣ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಅಗತ್ಯ ವಿರುವ ಉಕ್ಕನ್ನು ಪೂರೈಸಲಿದೆ ಎಂದು ಕಂಪನಿಯ ಸಿಇಒ ಜೋಬ್ರೋ ಕಿಂಗ್ ತಿಳಿಸಿದ್ದಾರೆಂದು ಮೂಲಗಳು ವರದಿ ಮಾಡಿವೆ.
ಅಮೆರಿಕಾದಲ್ಲಿ ಅತಿ ದೊಡ್ಡ ಉಕ್ಕಿನ ಕಾರ್ಖಾನೆ ನಿರ್ಮಿಸಲಿದೆ ಭಾರತದ ಕಂಪೆನಿ! ಡೊನಾಲ್ಡ್ ಟ್ರಂಪ್ ಘೋಷಣೆ!!














