ಪ್ರಧಾನಿ ಮೋದಿಯಿಂದ ತಮಿಳುನಾಡಿನಲ್ಲಿ 13,000 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಚಾಲನೆ! ಬರದ ನಡುವೆಯೂ ತಮಿಳರ ಮೊಗದಲ್ಲಿ ಮಂದಹಾಸ!

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮಿಳುನಾಡಿನ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ನೀಡಲು ರಾಜ್ಯಾದ್ಯಂತ 13,000 ಕೋಟಿಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಸ್ತೆ, ರೈಲ್ವೆ, ಮೆಟ್ರೋ, ಬಂದರು ಮತ್ತು ವೈಜ್ಞಾನಿಕ ಸಂಶೋಧನಾ ವಲಯ ಸೇರಿದಂತೆ ಹಲವು ಪ್ರಮುಖ ರಂಗಗಳಿಗೆ ಈ ಯೋಜನೆಗಳು ಹೊಸ ಶಕ್ತಿ ತುಂಬಲಿವೆ.

Advertisement

ಬೆಳಗ್ಗೆ 11:30 ಕ್ಕೆ ಚೆನ್ನೈ ಮೆಟ್ರೋದ ಫೇಸ್-2 ಅಡಿಯಲ್ಲಿ ಪೊರೂರ್ ಬೈಪಾಸ್ ನಿಲ್ದಾಣದಿಂದ ಪೂನಮಲ್ಲಿ ಬೈಪಾಸ್ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಧಾನಿ ಮೋದಿ ಅವರು ಖುದ್ದು ಪ್ರಯಾಣ ನಡೆಸಲಿದ್ದಾರೆ. 4,900 ಕೋಟಿ ವೆಚ್ಚದ ಈ ಮಾರ್ಗವು ವಿಶೇಷವಾದ 3.7 ಕಿ.ಮೀ.ಉದ್ದದ ‘ಡಬಲ್ ಡೆಕ್ಕರ್’ ರಚನೆ ಮತ್ತು ಚಾಲಕರಹಿತ ಕಾರ್ಯಾಚರಣೆಗೆ ಬೆಂಬಲ ನೀಡುವ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ನಂತರ ಚೆನ್ನೈನ ಪ್ರಸಿದ್ಧ ಶ್ರೀ ಜಲಕಂಠೇಶ್ವರರ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮತ್ತು ದರ್ಶನ ಪಡೆಯಲಿದ್ದಾರೆ. ತದನಂತರ ಐಐಟಿ ಮದ್ರಾಸ್‌ನ ಬ್ರೈನ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿಯವರು ಭಾಗವಹಿಸಿ ತಮಿಳುನಾಡಿನ ಪ್ರಮುಖ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಭಾಷಣ ಮಾಡಲಿದ್ದಾರೆ. ರಾಜ್ಯದ ರಸ್ತೆ ಸಂಪರ್ಕವನ್ನು ಬಲಪಡಿಸಲು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

Advertisement
Advertisement

ಮುಕ್ಕಾಲು ಶತಮಾನದ ಕನಸಾಗಿದ್ದ ಕಾರೈಕಲ್-ಪೆರಾಲಂ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದರೊಂದಿಗೆ ಕೊಯಮತ್ತೂರು ಭಾಗದಲ್ಲಿ ಮೂರು ರೈಲ್ವೆ ಫ್ಲೈಓವರ್‌ಗಳು ಲೋಕಾರ್ಪಣೆಯಾಗಲಿದ್ದು, ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನವೀಕರಿಸಲಾದ ಪಳನಿ, ವೆಲ್ಲೂರು ಕಂಟೋನ್ಮೆಂಟ್, ಅಂಬಾಸಮುದ್ರಂ, ಪರಮಕುಡಿ ಮತ್ತು ನಾಮಕ್ಕಲ್‌ನ 5 ‘ಅಮೃತ್ ಸ್ಟೇಷನ್’ಗಳನ್ನು ಉದ್ಘಾಟಿಸಲಿದ್ದಾರೆ. ಚೆನ್ನೈ ಬಂದರಿನಲ್ಲಿ ಸುಧಾರಿತ ಕ್ರೂಸ್ ಟರ್ಮಿನಲ್, ಗೋದಾಮುಗಳು ಸೇರಿದಂತೆ ನಾಲ್ಕು ಯೋಜನೆಗಳು ಮತ್ತು ವಿ.ಓ. ಚಿದಂಬರನಾರ್ ಬಂದರಿನಲ್ಲಿ ಸ್ವಚ್ಛ ಇಂಧನ ಹಾಗೂ ಕಂಟೇನರ್ ಸಾಮರ್ಥ್ಯ ಹೆಚ್ಚಿಸುವ 8 ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕಾಮರಾಜರ್ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ ಹಂತ-1 ಮತ್ತು ಹಂತ-2 ರ ಬೃಹತ್ ಡ್ರೆಜ್ಜಿಂಗ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (CPCL) ನ ಮನಾಲಿ ರಿಫೈನರಿಯಲ್ಲಿ ಜಾಗತಿಕ ಗುಣಮಟ್ಟದ ಪ್ರೀಮಿಯಂ ಲೂಬ್ರಿಕಂಟ್‌ಗಳನ್ನು ತಯಾರಿಸಲು ಬೇಕಾದ ‘ಗ್ರೂಪ್ II/III ಲೂಬ್ ಆಯಿಲ್ ಬೇಸ್ ಸ್ಟಾಕ್ಸ್’ (LOBS) ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಐಐಟಿ ಮದ್ರಾಸ್‌ನ ‘ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್’ (SGBC) ಅನ್ನು ಪ್ರಧಾನಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಮಾನವನ ಭ್ರೂಣದ ಹಂತದಿಂದ ಹಿಡಿದು ವೃದ್ಧಾಪ್ಯದವರೆಗಿನ 100 ಕ್ಕೂ ಹೆಚ್ಚು ಮಾನವ ಮಿದುಳುಗಳನ್ನು ಕೋಶ ಮಟ್ಟದಲ್ಲಿ ತ್ರೀ-ಡೈಮೆನ್ಷನಲ್ (3D) ಅಟ್ಲಾಸ್ ಆಗಿ ನಕ್ಷೆ ಮಾಡುವ ವಿಶ್ವದ ಮೊದಲ ಜಾಗತಿಕ ವೈಜ್ಞಾನಿಕ ಮಿಷನ್ ಅನ್ನು ಅವರು ಪ್ರಾರಂಭಿಸಲಿದ್ದಾರೆ. ಜೊತೆಗೆ ಪಾರ್ಶ್ವವಾಯು ಸಂಶೋಧನೆಗೆ ನೆರವಾಗುವ ವಿಶಿಷ್ಟ ‘C-STROKE’ ಮಾನವ ಇಸ್ಕೆಮಿಕ್ ಸ್ಟ್ರೋಕ್ ಅಟ್ಲಾಸ್ ಅನ್ನು ಬಿಡುಗಡೆ ಮಾಡಲಿದ್ದಾರೆ.
ಚೆನ್ನೈನ ಪ್ರತಿಷ್ಠಿತ ‘ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ’ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಭಾಗವಹಿಸಿ ಯುವ ಪೀಳಿಗೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page