ಬಿಡುಗಡೆಗೂ ಮುನ್ನವೇ 22 ಕೋಟಿ ಗಳಿಸಿದ ಜೈಲರ್‌ 2! ಬಾಕ್ಸ್‌ ಆಫೀಸ್‌ನಲ್ಲಿ ಧೂಳಿಬ್ಬಿಸಲಿದೆಯೇ ರಜನೀಕಾಂತ್‌ ಚಿತ್ರ??!

ಚೆನ್ನೈ : ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ, ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಜೈಲರ್ 2’ ಅಕ್ಟೋಬರ್ 15ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವು ಬಿಡುಗಡೆಗೂ ಮುನ್ನವೇ ಪ್ರೀ -ಸೇಲ್ಸ್ ಮತ್ತು ಅಡ್ವಾನ್ಸ್ ಬುಕಿಂಗ್ ಮೂಲಕ ಭರ್ಜರಿ ಸದ್ದು ಮಾಡುತ್ತಿದ್ದು, ಸಂಪೂರ್ಣವಾಗಿ ಭಾರತದಲ್ಲಿ ಬುಕಿಂಗ್ ಆರಂಭವಾಗದಿದ್ದರೂ ಈಗಾಗಲೇ ವಿಶ್ವದಾದ್ಯಂತ 22 ಕೋಟಿ ರೂ.ಗಳಿಗೂ ಅಧಿಕ ಹಣ ಸಂಗ್ರಹಿಸಿದೆ.

Advertisement

ಆ ಮೂಲಕ ಮೊದಲ ದಿನವೇ ಚಿತ್ರ ದೊಡ್ಡಮಟ್ಟದಲ್ಲಿ ಗಳಿಕೆ ಕಾಣುವ ಸುಳಿವು ಸಿಕ್ಕಿದೆ. ಬಿಡುಗಡೆಗೆ ನಾಲ್ಕುದಿನಗಳು ಬಾಕಿ ಇರುವಂತೆ ‘ಜೈಲರ್ 2’ ವಿಶ್ವ ಬಾಕ್ಸ್ಆಫೀಸ್‌ನಲ್ಲಿ 22.32 ಕೋಟಿ ರೂ.ಗಳನ್ನು ಗಳಿಸಿದೆ. ಈ ಪೈಕಿ ಸಿಂಹಪಾಲು ಅಂ ದರೆ 17 ಕೋಟಿ ರೂ.ಗಳಿಗೂ ಹೆಚ್ಚು ವಿದೇಶಿ ಮಾರುಕಟ್ಟೆಯಿಂದ ಬಂದಿದೆ. ಸ್ವದೇಶದಲ್ಲಿ ಸಿನಿಮಾ 5.32 ಕೋಟಿ ರೂ.ಗಳನ್ನು ಗಳಿಸಿದೆ. ಇದರಲ್ಲಿ ಮೊದಲ ದಿನದ ಮುಂಗಡ ಬುಕಿಂಗ್‌ಗೆ 3.84 ಕೋಟಿ ರೂ. ಸೇರಿದ್ದು, ಚೆನ್ನೈ ನಗರವೊಂದರಲ್ಲೇ 2.50 ಕೋಟಿ ರೂ. ಸಂಗ್ರಹವಾಗಿದೆ. ಸಾಕ್ನಿಕ್ ವರದಿ ಪ್ರಕಾರ, 2,674 ಸ್ಕ್ರೀನ್‌ಗಳಲ್ಲಿ 2.9 ಲಕ್ಷಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗುವ ಮೂಲಕ ಒಟ್ಟು 5.32 ಕೋಟಿ ರೂ. ಸಂಗ್ರಹವಾಗಿದೆ. ಒಟ್ಟು ದೇಶೀಯ ಗಳಿಕೆಯಲ್ಲಿ ತಮಿಳುನಾಡು 5.05 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 25.96 ಲಕ್ಷ ರೂ. ಸಂಗ್ರಹವಾಗಿದೆ. ಮೂಲ ತಮಿಳು ಆವೃತ್ತಿಯು 5.49 ಕೋಟಿ ರೂ. ಗಳಿಸಿದ್ದರೆ, ಡಬ್ ಮಾಡಲಾದ ಹಿಂದಿ ಆವೃತ್ತಿಯು 18 ಪ್ರದರ್ಶನಗಳಿಂದ ಕೇವಲ 384 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ 77,000 ರೂ.ಗಳನ್ನು ಗಳಿಸಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೀ-ಸೇಲ್ಸ್ ಮೂಲಕ ಸಿನಿಮಾ 1 ಮಿಲಿಯನ್ ಡಾಲರ್ ಗಡಿಯನ್ನು ದಾಟಿದೆ. ರಜಿನಿಕಾಂತ್ ಅವರ ಪ್ರಮುಖ ಮಾರುಕಟ್ಟೆಯಾದ ಉತ್ತರ ಅಮೆರಿಕ (ವಿಶೇಷವಾಗಿ ಯುಎಸ್), ಯುಎಇ,ಯುಕೆ, ಆಸ್ಟ್ರೇಲಿಯಾ ಮತ್ತು ಯುರೋಪ್ ದೇಶಗಳಿಂದ ಹೆಚ್ಚಿನ ಗಳಿಕೆ ಬಂದಿದೆ. ಮೊದಲ ಭಾಗ ‘ಜೈಲರ್’ ಕೂಡ ವಿದೇಶಗಳಲ್ಲಿ ಬ್ಲಾಕ್‌ಬಸ್ಟರ್ ಆಗಿತ್ತು.
ಕಲಾನಿಧಿ ಮಾರನ್ ಅವರ ಸನ್ ಪಿಚ್ಚರ್ಸ್ ನಿರ್ಮಾಣದ ‘ಜೈಲರ್ 2’ ಚಿತ್ರದಲ್ಲಿ ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ರಮ್ಯಾ ಕೃಷ್ಣನ್, ವಿದ್ಯಾ ಬಾಲನ್, ಯೋಗಿ ಬಾಬು ಮತ್ತು ಜತಿನ್ ಸರ್ನಾ ಮುಂತಾದವರು ನಟಿಸಿದ್ದಾರೆ. ಜೊತೆಗೆ ಅತಿಥಿ ಪಾತ್ರಗಳಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್, ತಮಿಳು ನಟ ವಿಜಯ್ ಸೇತುಪತಿ, ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಕಾಣಿಸಿಕೊಳ್ಳಲಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page