ಹೊಸದಿಲ್ಲಿ: ಭಾರತದಲ್ಲಿ ಹೆಚ್ಚು ಆದಾಯವಿರುವ ಕುಟುಂಬಗಳ ದಿನದ ಸರಾಸರಿ ಆದಾಯ, ಮುಂದುವರಿದ ರಾಷ್ಟ್ರಗಳ ಕಡುಬಡವರ ದಿನದ ಆದಾಯಕ್ಕಿಂತ ತೀರಾ ಕೆಳಮಟ್ಟದಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
‘ಪಾವರ್ಟಿ ಆ್ಯಂಡ್ ಇನಿಕ್ವಾಲಿಟಿ ಪ್ಲಾಟ್ಫಾರ್ಮ್’ (ಬಡತನ ಮತ್ತು ಅಸಮಾನತೆ) ಪ್ರಕಟಿಸಿರುವ ಅಂಕಿ-ಅಂಶದಲ್ಲಿ ಭಾರತದ ಆರ್ಥಿಕ ಸಮೀಕ್ಷೆ ಯಲ್ಲಿ ಭಾರತದಲ್ಲಿ ಮಾಸಿಕ 80,000 ರೂ. ಆದಾಯವಿರುವ ಕುಟುಂಬಗಳನ್ನು ಶ್ರೀಮಂತ ಕುಟುಂಬ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಅಂಥ ಕುಟುಂಬ ಗಳಲ್ಲಿ ಶೇ.10ರಷ್ಟು ಕುಟುಂಬಗಳ ದಿನದ ಕನಿಷ್ಠ ಆದಾಯ 956.47ರೂ. ಆಗಿದ್ದರೆ, ಅಮೆರಿಕದಲ್ಲಿ 16,547 ರೂ., ಕೆನಡಾ-ಆಸ್ಟ್ರೇಲಿಯದಲ್ಲಿ 12,339 ರೂ. ಹಾಗೂ 12.243 ರೂ. ಇದೆ ಪತ್ರಿಕಾ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಭಾರತದ ಕಡುಬಡವರಲ್ಲಿ ಶೇ.10ರಷ್ಟು ಮಂದಿಯ ದಿನದ ಕನಿಷ್ಠ ಆದಾಯ 286.95 ರೂ.ಗಳಿದ್ದರೆ, ಅಮೆರಿಕದಲ್ಲಿ ಇದು 2,391ರೂ., ಕೆನಡಾದಲ್ಲಿ 2,965ರೂ. ಇದೆ. ಅಂದರೆ, ಭಾರತದಲ್ಲಿ ಉತ್ತಮ ಆದಾಯವಿರುವವವರ ಜೀವನ ಮಟ್ಟ ಸಿರಿವಂತ ರಾಷ್ಟ್ರಗಳ ಬಡವರ ಜೀವನ ಮಟ್ಟಕ್ಕಿಂತ ಕಳಪೆಯಾಗಿದ್ದು ಈ ಅಸಮತೋಲನ ಸರಿಪಡಿಸಬೇಕೆಂದು ವರದಿ ಹೇಳಿದೆ.












