ಸೌಜನ್ಯಾ ಪ್ರಕರಣದಲ್ಲಿ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ ರಚನೆಯಾಗಿದೆ. ಆದರೆ ಈ ತನಿಖೆಯಿಂದ ಪ್ರಕರಣದ ತಾರ್ಕಿಕ ಅಂತ್ಯ ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯವಾದಿ ಅಮೃತೇಶ್ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಯ್ಸ್ ಆಫ್ ಪಬ್ಲಿಕ್ ಸಂಘಟನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತಾಗಿರುವುದರಿಂದ ಅವರನ್ನು ತನಿಖೆಯಿಂದ ಹೊರಗಿಡುವಂತೆ ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ. ಆದರೆ ಸಂತೋಷ್ ರಾವ್ ವಿರುದ್ಧ ಹಲವು ಬಲವಾದ ಸಾಕ್ಷ್ಯಗಳಿರುವುದರಿಂದ ಅವರನ್ನೂ ಮರು ತನಿಖೆಗೆ ಒಳಪಡಿಸಬೇಕು. ಫಾರೆನ್ಸಿಕ್ ವರದಿಗಳಲ್ಲಿ ಸಂತೋಷ್ ರಾವ್ ದೇಹದಲ್ಲಿ ಗಾಯಗಳಿರುವ ಬಗ್ಗೆ ಸಿಬಿಐ ತನಿಖೆಯಲ್ಲಿ ದೃಢಪಟ್ಟಿತ್ತು. ಆದರೆ ಸಿಬಿಐ ಸರ್ಕಾರಿ ಅಭಿಯೋಜಕರಾದ ಬಿ.ಆರ್. ಶಿವಾನಂದ ಪೆರ್ಲ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವ ಸಂಘಟನೆಗಳ ಪರ ಕೆಲಸ ಮಾಡಿ ಅವರನ್ನು ನಿರಪರಾಧಿ ಎಂದು ಮಾಡಲಾಗಿದೆ ಎಂದು ಅಮೃತೇಶ್ ಆರೋಪಿಸಿದರು.
ಸೌಜನ್ಯಾ ಪ್ರಕರಣದ ಹೆಸರಲ್ಲಿ ಒಂದು ಗ್ಯಾಂಗ್ ಹಣ ಮಾಡಿದೆ. ಅಲ್ಲದೆ ಪ್ರಸಿದ್ಧ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡಲು ಅರ್ಬನ್ ನಕ್ಸಲೈಟ್ಸ್, ಲೆಫ್ಟಿಸ್ಟ್ಗಳು ಮಾಡಿರುವ ಷಡ್ಯಂತ್ರ ಇದು. ಸೌಜನ್ಯಾ ಪ್ರಕರಣದಲ್ಲಿ ಹಿನ್ನಡೆಯಾದಾಗ ಕೆಲವು ನಿರ್ಧಿಷ್ಟ ಗುಂಪಿನ ಜನ ಬುರುಡೆ ಪ್ರಕರಣ ಆರಂಭಿಸಿದರು. ಸರಕಾರ ಖರ್ಚು ಮಾಡಿ ಅನಧಿಕೃತ ಶವಗಳನ್ನು ಹೂತಿರುವ ಪ್ರಕರಣದ ತನಿಖೆ ನಡೆಸಿದೆ. ಆದರೆ ಈ ತನಿಖೆಯ ಅಂತಿಮ ವರದಿ ಇನ್ನೂ ಬಹಿರಂಗ ಆಗಿಲ್ಲ. ಚಿನ್ನಯ್ಯ ಆರೋಪಿಸುವ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟೆಣ್ಣವರ್, ಯೂಟ್ಯೂಬರ್ ಸಮೀರ್ ಸೇರಿದಂತೆ ಯಾರ ಮೇಲೂ ಪ್ರಕರಣ ದಾಖಲಾಗದೇ ಇರುವುದು ದುರಂತ ಎಂದು ಅಮೃತೇಶ್ ಹೇಳಿದರು.
ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಕೆಲವು ಗ್ಯಾಂಗ್ ಹಣ ಮಾಡುವ ಉದ್ದೇಶದಿಂದ ಕ್ಷೇತ್ರದ ವಿರುದ್ಧ ಕುತಂತ್ರ ನಡೆಸುತ್ತಿದೆ. ಕೆಲವು ವಿಷಯ ಮುಚ್ಚಿಟ್ಟು ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಸುಪ್ರಿಂಕೋರ್ಟ್ ಸಂಪೂರ್ಣವಾಗಿ ಹೊಸದಾಗಿ ತನಿಖೆ ಮಾಡಲು ಎಸ್ಐಟಿ ರಚನೆ ಮಾಡಲು ಸೂಚಿಸಿದೆ. ಆದರೆ ಮೂರು ತಿಂಗಳಲ್ಲಿ ಪ್ರಕರಣದ ತೀರ್ಪು ಬರಲು ಸಾಧ್ಯವಿಲ್ಲ. 14 ವರ್ಷದ ಸಾಕ್ಷ್ಯಾಧಾರಗಳು ಈಗ ಸಿಗಲು ಸಾಧ್ಯವಿಲ್ಲ. ಈ ಗ್ಯಾಂಗ್ನ ನಿಜವಾದ ಟಾರ್ಗೆಟ್ ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ್ ಜೈನ್ ಅಲ್ಲ. ಬದಲಾಗಿ ಕ್ಷೇತ್ರವೇ ಆಗಿದೆ ಎಂದು ವಕೀಲರು ಹೇಳಿದ್ದಾರೆ.
ಮೊದಲು ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದರು. ಮರುದಿನ ಮೃತದೇಹ ಸಿಕ್ಕ ಬಳಿಕ ದೇಹದ ಗಾಯಗಳನ್ನು ನೋಡಿ ಅತ್ಯಾಚಾರ ಹಾಗೂ ಕೊಲೆ ಎಂದು ಎಫ್ಐಆರ್ ದಾಖಲಾಗುತ್ತದೆ. ಸಿಐಡಿಗೆ ಕೊಡಲಾಗಿತ್ತು. ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸೌಜನ್ಯಾ ಘಟನೆ ಬಳಿಕ ಬೆಳ್ತಂಗಡಿಯಲ್ಲಿ ಸೌಜನ್ಯಾ ತಾಯಿ ಕುಸುಮಾವತಿ, ತಂದೆ ಚಂದಪ್ಪ ಗೌಡ ಹಾಗೂ ಮಾವ ವಿಠಲ ಗೌಡ ಬೆಳ್ತಂಗಡಿಯಲ್ಲಿ ಪ್ರೆಸ್ಮೀಟ್ ಮಾಡಿದ್ದರು. ಆಗ ಸೌಜನ್ಯಾ ತಾಯಿ, ಕುಸುಮಾವತಿ ಅವರು ಧರ್ಮಸ್ಥಳದಿಂದ ಯಾವುದೇ ಒತ್ತಡ ಇಲ್ಲ. ಜಾಗದ ಸಮಸ್ಯೆಯಾಗಲೀ, ಯಾವುದೇ ಒತ್ತಡ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿಕೆ ಕೊಟ್ಟಿದ್ದರು. ಹೋಟೆಲ್ ಬಂದ್ ಮಾಡಿಲ್ಲ. ಬೆದರಿಕೆಯೂ ಬಂದಿಲ್ಲ ಎಂದಿದ್ದರು. ಧರ್ಮಸ್ಥಳದಿಂದ ನಮಗೆ ಸಪೋರ್ಟ್ ಇದೆ ಎಂದು ಅವರ ತಾಯಿ ಹೇಳಿದ್ದರು. ನಂತರ ಕೆಲವು ನಿರ್ದಿಷ್ಟ ಗುಂಪುಗಳಿಗೆ ಹಿಂದೂ ಗುರು, ಮಠಾಧೀಶರನ್ನು ಟಾರ್ಗೆಟ್ ಮಾಡಲು ಆರಂಭಿಸಿದರು. ಇದರಲ್ಲಿ ಕ್ಷೇತ್ರದವರ ಕೈವಾಡ ಇದೆ ಎಂದು ಗುಲ್ಲೆಬ್ಬಿಸಿದ್ದರು. ಸಂತೋಷ್ ರಾವ್ರನ್ನು ಬಿಡಿಸಿಕೊಂಡು ಬರಲು ಸಾಕಷ್ಟು ಖರ್ಚು ಮಾಡಿರುವುದಾಗಿ ಸ್ವತಃ ಮಹೇಶ್ ಶೆಟ್ಟಿ ತಿಮರೋಡಿ ಅವರೇ ಹೇಳಿದ್ದಾರೆ ಎಂದು ಅಮೃತೇಶ್ ಹೇಳಿದರು.
ಈ ಸಂದರ್ಭದಲ್ಲಿ ವಕೀಲ ಸದಾನಂದ ಗೌಡ ಉಪಸ್ಥಿತರಿದ್ದರು.












