“ವಂದೇ ವಾಂಚಿತ ಕಾಮಾರ್ಥ ಚಂದ್ರಾರ್ಧಕೃತಶೇಖರಂ, ಸಿಂಹರೂಢ ಅಷ್ಟಭುಜ ಕೂಷ್ಮಾಂಡ ಯಶಸ್ವಿನಿ”
ನಾಳೆ ನವರಾತ್ರಿ ಹಬ್ಬದ ನಾಲ್ಕನೇ ದಿನ. ನಾಳೆಯ ಬಣ್ಣ ಕಡು ನೀಲಿ. ತಾಯಿ ಕೂಷ್ಮಾಂಡ ದೇವಿಯನ್ನು ಪೂಜಿಸುವ ಮಂಗಳಕರ ದಿನ.
ಸಂಸ್ಕೃತದಲ್ಲಿ ‘ಕು’ ಅಂದರೆ ಸ್ವಲ್ಪ/ಚಿಕ್ಕ, ‘ಉಷ್ಮಾ’ ಅಂದರೆ ಉಷ್ಣತೆ ಅಥವಾ ಶಕ್ತಿ, ಮತ್ತು ‘ಅಂಡ’ ಅಂದರೆ ಮೊಟ್ಟೆ ಎಂದರ್ಥ. ಜಗತ್ತು ಸಂಪೂರ್ಣ ಕತ್ತಲೆಯಿಂದ ಕೂಡಿದ್ದ ಶೂನ್ಯವಾಗಿದ್ದಾಗ, ದೇವಿ ಕೂಷ್ಮಾಂಡಳು ತನ್ನ ಮಂದಹಾಸದಿಂದ (ಮೃದುವಾದ ಮುಗುಳ್ನಗೆ) ವಿಶ್ವಕ್ಕೆ ಬೆಳಕನ್ನು ನೀಡಿದಳು. ಈಕೆಯ ಮಂದಹಾಸದಿಂದ ಒಂದು ಬ್ರಹ್ಮಾಂಡ ಸೃಷ್ಟಿಯಾಗಿ ಸಕಲ ಜೀವಚೈತನ್ಯ ಚಿಗುರಿತು. ದೇವಿ ತನ್ನ ಮಂದಹಾಸದಿಂದ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಎಂಬ ಮೂರು ದೇವಿಯರನ್ನು ಸೃಷ್ಟಿಸಿದಳು ಎಂದು ಕೂಷ್ಮಾಂಡಾ ದೇವಿ ಕಥೆಯು ವಿವರಿಸುತ್ತದೆ. ಈ ದೇವಿಯು ಸೂರ್ಯಮಂಡಲದ ನೆಲೆಸಿದ್ದು, ಸೂರ್ಯನಿಗೆ ಶಕ್ತಿ ಮತ್ತು ಬೆಳಕನ್ನು ನೀಡುತ್ತಾಳೆ.
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಬೇಕು, ಶುಭ್ರವಾದ ಬಟ್ಟೆಯನ್ನು ಧರಿಸಿ, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ದೇವಿರ ಚಿತ್ರ ಅಥವಾ ವಿಗ್ರಹವನ್ನು ಇರಿಸಿ, ದೀಪ ಹಚ್ಚಿ, ಅಕ್ಷತೆ, ಗಂಧ ಮತ್ತು ಹೂವುಗಳನ್ನು ಅರ್ಪಿಸಬೇಕು. ನಂತರ ಸಿಹಿ ನೈವೇದ್ಯವನ್ನು ಅರ್ಪಿಸಿ, ದೇವಿಯ ಮಂತ್ರವನ್ನು ಭಕ್ತಿಯಿಂದ ಜಪಿಸಬೇಕು, ಪೂಜೆಯ ಕೊನೆಯಲ್ಲಿ ಧೂಪ-ದೀಪ ತೋರಿಸಿ ಆರತಿ ಮಾಡಬೇಕು, ನಂತರ ಕುಟುಂಬದವರಿಗೆ ಪ್ರಸಾದ ಹಂಚಬೇಕು.












