ಪುತ್ತೂರು : ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಕ್ತರ ಭಾವನೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದ ಆಚರಣೆಗಳು ನಡೆಯುತ್ತಿದ್ದು, ಈ ಎಲ್ಲವನ್ನೂ ಮಹಾಲಿಂಗೇಶ್ವರ ದೇವರೇ ನೋಡಿಕೊಳ್ಳಬೇಕು ಮತ್ತು ಕ್ಷೇತ್ರದ ನಂಬಿಕೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಶಕ್ತಿ ಕರುಣಿಸಬೇಕೆಂದು ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಕ್ಷೇತ್ರದ ನಡೆಯಲ್ಲಿ ಪ್ರಾರ್ಥನೆ ಸೇವೆ ನಡೆಸಲಾಯಿತು.
ಕ್ಷೇತ್ರದಲ್ಲಿ ಹೊಸದಾಗಿ ನೇಮಕಗೊಂಡಿರುವ ವ್ಯವಸ್ಥಾಪನಾ ಸಮಿತಿ ಕ್ಷೇತ್ರದ ಜಾಗವನ್ನು ಬಳಸಿಕೊಂಡು ಸಾರ್ವಜನಿಕ ರಸ್ತೆಯನ್ನು ನಿರ್ಮಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಅಲ್ಲದೆ, ಕ್ಷೇತ್ರದಲ್ಲಿ ನಡೆಯುವ ಹಲವು, ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದ್ದು, ಈ ಎಲ್ಲಾ ಗೊಂದಲಗಳನ್ನು ಮಹಾಲಿಂಗೇಶ್ವರ ದೇವರೇ ಪರಿಹರಿಸಬೇಕೆಂದು ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಂರಕ್ಷಣಾ ಸಮಿತಿ ವತಿಯಿಂದ ಹಿಂದೂ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ, ಅನಿಲ್ ಕಣ್ಣಾನೋರ್ಜಿ, ಹರಿಪ್ರಸಾದ್ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ ಅರ್ಚಕರಿಗೆ ವಿಚಾರವನ್ನು ತಿಳಿಸಿದ ಬಳಿಕ ಅರ್ಚಕರು ದೇವರ ಮುಂದೆ ಸಂರಕ್ಷಣಾ ಸಮಿತಿಯ ಪ್ರಕಾರ ಪ್ರಾರ್ಥನೆ ನೆರವೇರಿಸಿದ್ದಾರೆ. ಎಲ್ಲಾ ಗೊಂದಲಗಳಿಗೂ ಶೀಘ್ರ ತೆರೆ ಎಳೆಯಬೇಕು, ರಸ್ತೆಗೆ ನಮ್ಮ ವಿರೋಧವಿಲ್ಲ, ಆದರೆ ದೇವಸ್ಥಾನದ ಜಾಗದಲ್ಲಿ ರಸ್ತೆ ಮಾಡುವುದಕ್ಕೆ ನಮ್ಮ ವಿರೋಧ ಎನ್ನುವ ವಿಚಾರವನ್ನೂ ಪ್ರಾರ್ಥನೆಯಲ್ಲಿ ಉಲ್ಲೇಖಿಸಲಾಯಿತು. ಸಂರಕ್ಷಣಾ ಸಮಿತಿಯ ಮುಖಂಡರು ಸೇರಿದಂತೆ ಹಲವು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












