ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ | “ಕರ್ನಾಟಕ ಕುಸ್ತಿ ಕ್ಷೇತ್ರಕ್ಕೆ ಹೊಸ ದಿಕ್ಕು ; ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಸಾಧನೆ ಹೆಚ್ಚಿಸುವ ಗುರಿ”

ಬೆಂಗಳೂರು: ಕರ್ನಾಟಕ ರಾಜ್ಯ ಕುಸ್ತಿ ಸಂಘದ (ರಿ.) 2026–2030ನೇ ಸಾಲಿನ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಕುಸ್ತಿ ಕ್ರೀಡೆಯ ಅಭಿವೃದ್ಧಿ, ಪ್ರತಿಭಾವಂತ ಕುಸ್ತಿಪಟುಗಳಿಗೆ ಪ್ರೋತ್ಸಾಹ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಅವರು ಮತ್ತೊಮ್ಮೆ ಸಂಘದ ಚುಕ್ಕಾಣಿ ಹಿಡಿದಿದ್ದಾರೆ.

Advertisement


ಬೆಂಗಳೂರು ನಗರ ವಿಶ್ವವಿದ್ಯಾಲಯದ ಬಿಸಿಯು ಬೇಸ್‌ಕ್ಯಾಂಪ್‌ನಲ್ಲಿ ಸೋಮವಾರ ನಡೆದ ಚುನಾವಣೆಯನ್ನು ನಿವೃತ್ತ ನ್ಯಾಯಾಧೀಶರು ಹಾಗೂ ಚುನಾವಣಾಧಿಕಾರಿ ರಾಮಚಂದ್ರ ಎಂ. ಅವರ ನೇತೃತ್ವದಲ್ಲಿ ನಡೆಸಲಾಯಿತು. ಭಾರತೀಯ ಕುಸ್ತಿ ಫೆಡರೇಷನ್‌ನ ಉಪಾಧ್ಯಕ್ಷ ಹಾಗೂ ಚುನಾವಣಾ ವೀಕ್ಷಕ ವಿ.ಎನ್. ಪ್ರಸೂದ್ ಮತ್ತು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಚುನಾವಣಾ ವೀಕ್ಷಕಿ ಶ್ರೀಮತಿ ವಿದ್ಯಾ ಅವರ ಉಪಸ್ಥಿತಿಯಲ್ಲಿ ಚುನಾವಣೆ ಜರುಗಿತು. ಸಂಘದ 15 ಸದಸ್ಯರ ಆಡಳಿತ ಮಂಡಳಿಗೆ ಚುನಾವಣೆ ನಡೆಯಿತು.

Advertisement

ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಹಿರಿಯ ಉಪಾಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ಜಿ.ಎಸ್. ಪುಷ್ಪಲತಾ, ಪ್ರಸಾದ್ ಶೆಟ್ಟಿ, ವಿನೋದ್ ಕುಮಾರ್ ಕೆ., ಪ್ರತೀಕ್ ಪ್ರವೀಣ್ ಚಂದ್ರ ಶೆಟ್ಟಿ ಹಾಗೂ ಉಮೇಶ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಜೆ., ಖಜಾಂಚಿಯಾಗಿ ಶ್ರೀನಿವಾಸ್ ಅಂಗರಕೋಡಿ, ಜಂಟಿ ಕಾರ್ಯದರ್ಶಿಗಳಾಗಿ ನಾಗೇಶ್ ಎಸ್., ಅರ್ಜುನ್ ಎಂ. ಹಾಗೂ ಕುಮಾರ್ ಜೆ. ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಜಯ್ ನಾಯಕ್, ಭವ್ಯ ಹಾಗೂ ನಾಗೇಶ್ ಕೆ.ಎಂ. ಆಯ್ಕೆಯಾಗಿದ್ದಾರೆ.

ಕ್ರೀಡೆಯ ಬಗ್ಗೆ ಮೊದಲಿನಿಂದಲೂ ಅಪಾರ ಆಸಕ್ತಿ ಹೊಂದಿರುವ ಗುಣರಂಜನ್ ಶೆಟ್ಟಿ ಅವರು, ರಾಜ್ಯದ ಹಿರಿಯ ಕುಸ್ತಿಪಟುಗಳು ಹಾಗೂ ತರಬೇತುದಾರರ ಮನವಿಗೆ ಸ್ಪಂದಿಸಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಸೂಕ್ತ ಸೌಲಭ್ಯಗಳು ಮತ್ತು ಪ್ರೋತ್ಸಾಹದ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿದ್ದ ರಾಜ್ಯದ ಕುಸ್ತಿ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಸಂಘದ ಜವಾಬ್ದಾರಿ ವಹಿಸಿಕೊಂಡ ಅವರು, ಕುಸ್ತಿಪಟುಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕದ ಕುಸ್ತಿ ತಂಡವು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಹಿಂದೆ 16ನೇ ಸ್ಥಾನದಲ್ಲಿದ್ದ ಕರ್ನಾಟಕ ತಂಡವು 7ನೇ ಸ್ಥಾನಕ್ಕೆ ಏರಿದೆ ಎಂದು ತಿಳಿಸಲಾಗಿದ್ದು, ಇದು ರಾಜ್ಯದ ಕುಸ್ತಿ ಕ್ಷೇತ್ರದ ಬೆಳವಣಿಗೆಯ ಪ್ರಮುಖ ಮೈಲಿಗಲ್ಲಾಗಿದೆ. ಕರ್ನಾಟಕ ರಾಜ್ಯ ಕುಸ್ತಿ ಸಂಘದ ಚಟುವಟಿಕೆಗಳು ಹಾಗೂ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಫೆಡರೇಷನ್‌ನ ಪದಾಧಿಕಾರಿಗಳ ಮನವಿಯ ಮೇರೆಗೆ ಗುಣರಂಜನ್ ಶೆಟ್ಟಿ ಅವರು ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಸ್ಥಾನಕ್ಕೂ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಹಿರಿಯರ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ವಿಗೊಳಿಸಿದ ಹೆಗ್ಗಳಿಕೆಯೂ ಅವರದ್ದಾಗಿದೆ. ಇದಲ್ಲದೆ, ದಕ್ಷಿಣ ಭಾರತದ ಕುಸ್ತಿ ಸಂಘದ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿರುವ ಅವರು, ಭಾರತೀಯ ಬೀಚ್ ಕುಸ್ತಿ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಮಂಗಳೂರಿನಲ್ಲಿ ನಡೆದ ತಪಸ್ಯ ಬೀಚ್ ಫೆಸ್ಟಿವಲ್‌ನಲ್ಲಿ ಬೀಚ್ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯದ ಪ್ರತಿಭಾವಂತ ಹಾಗೂ ಉದಯೋನ್ಮುಖ ಕುಸ್ತಿಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ, ಪ್ರೋತ್ಸಾಹ ಮತ್ತು ಅವಕಾಶಗಳನ್ನು ಒದಗಿಸುವುದು ಗುಣರಂಜನ್ ಶೆಟ್ಟಿ ಅವರ ಪ್ರಮುಖ ಆಶಯವಾಗಿದೆ. ಕುಸ್ತಿಪಟುಗಳು ಒಲಿಂಪಿಕ್ಸ್ ಸೇರಿದಂತೆ ವಿವಿಧ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವಂತೆ ಸಿದ್ಧಪಡಿಸುವ ಗುರಿಯನ್ನು ಅವರು ಹೊಂದಿದ್ದಾರೆ.ನಪಾರದರ್ಶಕ ವ್ಯವಸ್ಥೆಯ ಮೂಲಕ ಅರ್ಹ ಕ್ರೀಡಾಪಟುಗಳಿಗೆ ನೆರವು ನೀಡುವುದರ ಜತೆಗೆ, ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಕರ್ನಾಟಕದಲ್ಲಿ ಕುಸ್ತಿ ಕ್ರೀಡೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ , ತಮ್ಮನ್ನು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಭಾರತೀಯ ಕುಸ್ತಿ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್, ಉಪಾಧ್ಯಕ್ಷ ವಿ.ಎನ್. ಪ್ರಸೂದ್, ಕಾರ್ಯಕಾರಿ ಸಮಿತಿ ಸದಸ್ಯ ಲೋಗನಾಥನ್ ಸೇರಿದಂತೆ ಫೆಡರೇಷನ್‌ನ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಕರ್ನಾಟಕದ ಎಲ್ಲ ಜಿಲ್ಲೆಗಳ ಕುಸ್ತಿ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೀಡಿದ ಸಹಕಾರಕ್ಕೂ ಕೃತಜ್ಞತೆ ವ್ಯಕ್ತಪಡಿಸಿದರು.

“ನನ್ನ ಮೇಲೆ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ಕರ್ನಾಟಕದಲ್ಲಿ ಕುಸ್ತಿ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ, ರಾಜ್ಯದ ಕುಸ್ತಿ ಕ್ಷೇತ್ರವನ್ನು ದೇಶದಲ್ಲೇ ಮಾದರಿಯಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ” ಎಂದು ಭರವಸೆ ನೀಡಿದರು. ತಮ್ಮೊಂದಿಗೆ ಆಯ್ಕೆಯಾದ ಇತರ 14 ಆಡಳಿತ ಮಂಡಳಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಅವರು, ಸಂಘದ ಅಭಿವೃದ್ಧಿಗೆ ಎಲ್ಲರ ಸಲಹೆ, ಪ್ರೋತ್ಸಾಹ, ಬೆಂಬಲ ಮತ್ತು ಸಹಕಾರ ಅಗತ್ಯವಿದೆ ಎಂದರು. ನಿಸ್ವಾರ್ಥ ಕ್ರೀಡಾಸೇವೆಯ ಮನೋಭಾವದೊಂದಿಗೆ ರಾಜ್ಯದಲ್ಲಿ ಕುಸ್ತಿ ಕ್ರೀಡೆಯನ್ನು ಮತ್ತಷ್ಟು ಬಲಪಡಿಸಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಹೆಚ್ಚಿಸುವ ಪ್ರತಿಭಾವಂತ ಕುಸ್ತಿಪಟುಗಳನ್ನು ರೂಪಿಸುವುದು ತಮ್ಮ ಉದ್ದೇಶವಾಗಿದೆ. ಕರ್ನಾಟಕವನ್ನು ಕುಸ್ತಿ ಕ್ರೀಡೆಯಲ್ಲಿ ದೇಶದ ಮಾದರಿ ರಾಜ್ಯವನ್ನಾಗಿ ರೂಪಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಭಾರತೀಯ ಕುಸ್ತಿ ಸಂಘದ ಅಧ್ಯಕ್ಷರಾದ ಸಂಜಯ್ ಕುಮಾರ್ ಸಿಂಗ್ ಅವರು ಕರ್ನಾಟಕ ಕುಸ್ತಿ ಸಂಘಕ್ಕೆ ಎರಡನೇ ಬಾರಿಗೆ‌ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬೆಳ್ಳಿಪ್ಪಾಡಿ ಗುಣರಂಜ‌ನ್‌ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಭಾರತೀಯ ಕುಸ್ತಿ ಸಂಘದ ಉಪಾಧ್ಯಕ್ಷರಾದ ವಿ.ಎನ್.ಪ್ರಸೂದ್, ಕಾರ್ಯಕಾರಿ ಸಮಿತಿಯ ಎಂ.ಲೋಗನಾಥನ್ , ಗುಣರಂಜನ್‌ ಶೆಟ್ಟಿ ಅವರ ತಂದೆ ನಡುಮುಗೇರು ವಿಠಲ್ ಶೆಟ್ಟಿ ಸೇರಿದಂತೆ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬೆಳ್ಳಿಪ್ಪಾಡಿ ಗುಣರಂಜ‌ನ್‌ ಶೆಟ್ಟಿ ಮತ್ತು ಹಿರಿಯ ಉಪಾಧ್ಯಕ್ಷರಾದ ನಿತ್ಯಾನಂದ ಶೆಟ್ಟಿಯವರನ್ನು ಮಂಗಳೂರು ಜಿಲ್ಲಾ ಕುಸ್ತಿ ಸಂಘದ ಸದಸ್ಯರಾದ ಸುಜಿತ್ ರೈ, ರಾಮದಾಸ್ ಶೆಟ್ಟಿ ವಿಟ್ಲ, ಸಮರ್ಥ್ ಭಂಡಾರಿ ಮತ್ತು ಗೋಕುಲ್ ದಾಸ್ ಭಂಡಾರಿರವರು ಅಭಿನಂದಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page