ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನನ್ನನ್ನೂ ಸಿಲುಕಿಸುವ ಸಂಚು ರೂಪಿಸಲಾಗಿತ್ತು. ಸ್ಟಿಂಗ್ ಆಪರೇಷನ್‌ನ ಮೂಲ ವ್ಯಕ್ತಿಯನ್ನ ಕರೆಸಿ, ಅವರಿಂದ ನ್ಯಾಯಾಲಯದಲ್ಲಿ 164ರ ಅಡಿಯಲ್ಲಿ ಹೇಳಿಕೆ ಕೊಡಿಸಿ, ನನ್ನನ್ನೂ ಕೇಸಲ್ಲಿ ಫಿಕ್ಸ್ ಮಾಡೋ ಪ್ಲ್ಯಾನ್ ನಡೆದಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ಈ ಹಿಂದೆಯೇ ಮಾತನಾಡಿದ್ದೆ. ವಿಜಯದಶಮಿಯ ಸಂದರ್ಭದಲ್ಲಿ ಯುದ್ಧಕ್ಕೆ ಹೋಗುವ ಸಮಯ ಬಂದಿದೆ ಎಂದು ಹೇಳಿದ್ದೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನ ಮರ್ಧನ ಮಾಡಿದಂತೆ, ಅನ್ಯಾಯದ ವಿರುದ್ಧ ಹೋರಾಡುವ ಕೆಲಸವೂ ನಡೆಯಬೇಕಿದೆ. ತಾಕತ್ ಇದ್ದರೆ ಪ್ರಿಯಾಂಕ್ ಖರ್ಗೆ ನನ್ನನ್ನು ಆರೆಸ್ಟ್ ಮಾಡಲಿ. ನನ್ನ ತಾಳ್ಮೆಗೂ ಮಿತಿಯಿದೆ. ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಸರಿಯಾದ ತನಿಖೆ ನಡೆಸಲಿ. ನಾನು ಹೋರಟಕ್ಕೆ ಸಿದ್ಧವಾಗಿದ್ದೇನೆ. ತಾಕತ್ತಿದ್ದರೆ ಟಚ್ ಮಾಡಿ ನೋಡಿ. ಸಂಶಯ ಬಂದವರನ್ನು ಆರೆಸ್ಟ್ ಮಾಡೋಕೆ ಪ್ರಿಯಾಂಕ್ ಖರ್ಗೆಯವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಕ್ರೋಧ ವ್ಯಕ್ತಪಡಿಸಿದರೆಂದು ಮೂಲಗಳು ಹೇಳಿವೆ.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ತಾವು ಸ್ಟೇ ಪಡೆಯಲು ಹೋಗಬೇಡಿ, ಧೈರ್ಯವಾಗಿ ಎದುರಿಸಿ ಅಂತ ಹೇಳಿದ್ದೆ. ಇತ್ತೀಚೆಗೆ ಸಿಎಂ ಆದೇಶದ ಮೇರೆಗೆ ಗೃಹ ಸಚಿವರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಸ್ಟಿಂಗ್ ಆಪರೇಷನ್ ಮೂಲ ವ್ಯಕ್ತಿಯಿಂದ ಹೇಳಿಕೆ ಪಡೆದು ನನ್ನನ್ನೂ ಈ ಕೇಸಲ್ಲಿ ಫಿಕ್ಸ್ ಮಾಡೋ ಪ್ಲ್ಯಾನ್ ನಡೆದಿತ್ತು ಎಂದರಲ್ಲದೇ, ನಾನೇನ್ ರೇವಣ್ಣನಾ? ಅವರಂತೆ ನನ್ನನ್ನ ಜೈಲಿಗೆ ಕಳುಹಿಸಲು ಸಾಧ್ಯವೇ? ಎಂದು ಗುಡುಗಿದರು.














