ಒಂದು ವೇಳೆ ನೆರೆಹೊರೆಯ ರಾಷ್ಟ್ರವಾದ ಪಾಕಿಸ್ತಾನ ಮತ್ತು ಅಮೆರಿಕ ನಡುವರ ಯುದ್ಧವೇನಾದರೂ ಸಂಭವಿಸಿದರೆ, ಭಾರತವು ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಲಿದೆ ಎಂದು ರಾಜಸ್ತಾನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮದನ್ ರಾಥೋಡ್ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕನ ಹೇಳಿಕೆಯನ್ನು ಖಂಡಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜೈಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಥೋಡ್, ಪಾಕಿಸ್ತಾನವು ನಮ್ಮ ನೆರೆಹೊರೆಯ ದೇಶ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಈ ಮಾತುಗಳನ್ನಾಡಿದ್ದರು ಎಂದು ಮೂಲಗಳು ವರದಿ ಮಾಡಿವೆ.
‘ನಾವೆಲ್ಲರೂ ಈ ವಿಚಾರವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಭಾರತದ ವಿಚಾರಕ್ಕೆ ಬಂದಾಗ, ಒಂದು ವೇಳೆ ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆಯುದ್ಧ ನಡೆದರೆ, ನಾವು ಪಾಕಿಸ್ತಾನದ ಪರವಾಗಿ ನಿಲ್ಲುತ್ತೇವೆ. ಏಕೆಂದರೆ ಅದು ನಮ್ಮ ನೆರೆಯ ದೇಶ. ಆದರೆ ನಮ್ಮ ನಡುವಿನ ವಿಷಯ ಬಂದಾಗ, ನಾವು ನಮ್ಮ ಭಾರತದ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ. ಹೌದಲ್ಲವೇ? ಈ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದರು. ರಾಥೋಡ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ವಕ್ತಾರೆ ಶಮಾಮೊಹಮ್ಮದ್, ಅವರೊಬ್ಬ ‘ದೇಶದ್ರೋಹಿ’ ಎಂದು ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ.
‘ನಮ್ಮ ಯೋಧರು ಹಾಗೂ ಅಮಾಯಕ ಜನರನ್ನು ಕೊಲ್ಲುವ ಭಯೋ ತ್ಪಾದಕ ರಾಷ್ಟ್ರ ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ಬಿಜೆಪಿ ಮತ್ತೊಮ್ಮೆ ಬಯಲುಮಾಡಿದೆ. ಅಮೆರಿಕ–ಪಾಕ್ಯುದ್ಧ ನಡೆದರೆ ಪಾಕಿಸ್ತಾನದ ಪರ ನಿಲ್ಲುವುದಾಗಿ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ಹೇಳಿದ್ದಾರೆ. ಈ ದೇಶದ್ರೋಹಿಯ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ. ಎಎಪಿ ಸಹ ಬಿಜೆಪಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದೆ. ಸ್ವತಃ ಬಿಜೆಪಿ ನಾಯಕರೇ ಪಾಕಿಸ್ತಾನದ ಪರ ನಿಲ್ಲುವ ಬಗ್ಗೆ ಮಾತನಾಡಿದಾಗ ಪ್ರಧಾನಿ ಮೋದಿಯವರ ರಾಷ್ಟ್ರೀಯತೆ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದೆ.
ಮತ್ತೊಂದೆಡೆ ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಥೋಡ್ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಸಂದರ್ಭವನ್ನು ಉಲ್ಲೇಖಿಸಿ ಈ ಮಾತುಗಳನ್ನು ಹೇಳಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ಜಾಲತಾಣ ಮೂಲಗಳು ವರದಿಯಲ್ಲಿ ಹೇಳಿವೆ.














