ಧಾರವಾಡ: ಅಪರೂಪದ ಅನುವಂಶಿಕ ರಕ್ತಸ್ರಾವದ ಕಾಯಿಲೆಯಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿನ ಜೀವ ಉಳಿಸಲು, ಜಗತ್ತಿನ ಅತ್ಯಂತ ಅಪರೂಪದ ರಕ್ತದ ಗುಂಪುಗಳಲ್ಲಿ ಒಂದಾದ ಬಾಂಬೆ ಬ್ಲಡ್ ಗ್ರೂಪ್ ರಕ್ತವನ್ನು ದಾನ ಮಾಡಲು 300ಕ್ಕೂ ಹೆಚ್ಚು ಕಿಲೋಮೀಟರ್ ಪ್ರಯಾಣಿಸಿ ಬಂದ ಚಿಕ್ಕಮಗಳೂರಿನ ರಕ್ತದಾನಿಯ ಮಾನವೀಯ ಕಾರ್ಯ ಗಮನ ಸೆಳೆದಿದೆ.
ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ವರ್ಷದ ಅಭಿನಂದನ್ ಎಂಬ ಮಗು ತೀವ್ರ ರಕ್ತಸ್ರಾವದಿಂದಾಗಿ ಹಿಮೋಗ್ಲೋಬಿನ್ ಮಟ್ಟ ತೀರಾ ಕುಸಿದು ಗಂಭೀರ ಸ್ಥಿತಿಯಲ್ಲಿತ್ತು. ಮಗುವಿನ ಜೀವ ಉಳಿಸಲು ತುರ್ತಾಗಿ ಒಂದು ಯೂನಿಟ್ ಬಾಂಬೆ ರಕ್ತದ ಅಗತ್ಯವಿತ್ತು. ಆದರೆ, ಅತ್ಯಂತ ವಿರಳವಾದ ಈ ರಕ್ತದ ಗುಂಪಿನ ದಾನಿಯನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿತ್ತು. ಮಗುವಿನ ತಂದೆ ಮಹಾಂತೇಶ ಅವರು ರಕ್ತದ ತುರ್ತು ಅಗತ್ಯಕ್ಕಾಗಿ ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ (ರಿ.) ಅನ್ನು ಸಂಪರ್ಕಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಫೌಂಡೇಶನ್ನ ಸಂಸ್ಥಾಪಕ ಶಿವಕುಮಾರ ರಟ್ಟಿಹಳ್ಳಿ ಅವರು ಅಪರೂಪದ ರಕ್ತದ ಗುಂಪು ಹೊಂದಿರುವ ರಕ್ತದಾನಿಯ ಹುಡುಕಾಟ ಆರಂಭಿಸಿದರು. ತೀವ್ರ ಪ್ರಯತ್ನದ ಬಳಿಕ ಚಿಕ್ಕಮಂಗಳೂರಿನ ಅಪರೂಪದ ರಕ್ತದಾನಿ ಮಹೇಶ್ ಕುಮಾರ್ ಅವರನ್ನು ಸಂಪರ್ಕಿಸಿ, ಮಗುವಿನ ಗಂಭೀರ ಪರಿಸ್ಥಿತಿಯನ್ನು ವಿವರಿಸಲಾಯಿತು. ಮಗುವಿನ ಜೀವ ಉಳಿಸುವ ತುರ್ತು ಅಗತ್ಯವನ್ನು ಅರಿತ ಮಹೇಶ್ ಕುಮಾರ್ ಅವರು ಯಾವುದೇ ವಿಳಂಬ ಮಾಡದೆ ರಕ್ತದಾನಕ್ಕೆ ಒಪ್ಪಿಕೊಂಡರು.
ಮಗುವಿನ ಜೀವ ಉಳಿಸುವ ಮಹತ್ತರ ಉದ್ದೇಶದಿಂದ ಚಿಕ್ಕಮಂಗಳೂರಿನಿಂದ ಧಾರವಾಡದತ್ತ ಪ್ರಯಾಣ ಬೆಳೆಸಿದ ಮಹೇಶ್ ಕುಮಾರ್ ಅವರು ಸುಮಾರು 300ಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಐದು ಗಂಟೆಗಳಿಗೂ ಅಧಿಕಕಾಲ ಪ್ರಯಾಣಿಸಿ, ಶುಕ್ರವಾರ ತಡರಾತ್ರಿ 1:30ರ ಸುಮಾರಿಗೆ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ತಲುಪಿದರು. ಬಳಿಕ ಆಸ್ಪತ್ರೆಯ ರಕ್ತಕೇಂದ್ರದಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮಗುವಿಗಾಗಿ ಒಂದು ಯೂನಿಟ್ ಅಪರೂಪದ ಬಾಂಬೆ ರಕ್ತವನ್ನು ದಾನ ಮಾಡಿದರು. ತುರ್ತು ಸಂದರ್ಭದಲ್ಲಿ ದೂರದ ಊರಿನಿಂದ ಆಗಮಿಸಿ ರಕ್ತದಾನ ಮಾಡಿದ ಅವರ ಕಾರ್ಯ ಮಾನವೀಯತೆ ಮತ್ತು ಪರೋಪಕಾರಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ರಕ್ತಕೇಂದ್ರದ ಸಿಬ್ಬಂದಿ ಪುನೀತ್ ಉಪಸ್ಥಿತರಿದ್ದರು. ಇನ್ನು ಮೂರು ವರ್ಷದ ಮಗುವಿನ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸ್ಪಂದಿಸಿ, ರಕ್ತದಾನಿಯನ್ನು ಪತ್ತೆಹಚ್ಚಿ, ಅಗತ್ಯ ರಕ್ತ ಲಭ್ಯವಾಗುವಂತೆ ಮಾಡಿದ ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ನ ಕಾರ್ಯಕ್ಕೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ರಕ್ತಕೇಂದ್ರದ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.














