ಬೆಂಗಳೂರು: ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ದರ್ಶನ್ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಾಣಿಜ್ಯ ಮಂಡಳಿಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. “ಆರ್ಥಿಕ ಸಂಕಷ್ಟ ಮತ್ತು ಸಿನಿಮಾದ ಬಿಡುಗಡೆಯ ಒತ್ತಡದಲ್ಲಿ ತಿಳಿಯದೆ ಮಾತನಾಡಿದ್ದೇನೆ, ಏಳು ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಿ” ಎಂದಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಎದುರಲ್ಲಿ ಶ್ರೀನಿವಾಸ್ ಅವರು ಕ್ಷಮೆ ಕೇಳಿದ್ದಾರೆ. ಕಾಟನ್ಪೇಟೆ ಗೇಟ್ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಎಮೋಷನಲ್ ಆಗಿ ಕೆಲವು ವಿಚಾರಗಳನ್ನ ಮಾತನಾಡಿಬಿಟ್ಟೆ. ನನ್ನ ಕಾಟನ್ಪೇಟೆ ಗೇಟ್ ಸಿನಿಮಾ ರಿಲೀಸ್ ಆಗಬೇಕಿತ್ತು, ಹಣದ ಅವಶ್ಯಕತೆ ಇತ್ತು. ಹಾಗಾಗಿ, ತುಂಬ ದುಃಖದಿಂದ ಹಾಗೆಲ್ಲ ಮಾತನಾಡಿಬಿಟ್ಟೆ.
ರಾಜ್ಕುಮಾರ್ ಅವರ ಮೇಲೆ ನನಗೆ ತುಂಬಾ ಅಭಿಮಾನ ಇದೆ. ಪುನೀತ್ ಸರ್ ದೇವರು. ನಾನು ಅವರ ಜೊತೆ ಸಿನಿಮಾ ಮಾಡೋಕ್ಕಿಂತ ಮುಂಚೆಯಿಂದಲೂ ಅವರ ಜೊತೆ ನನಗೆ ಒಡನಾಟ ಇತ್ತು. ಕಾಟನ್ಪೇಟೆ ಗೇಟ್ ಸಿನಿಮಾ ಈವೆಂಟ್ನಲ್ಲಿ, ಮಯೂರ ಅಂತ ಒಂದು ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಆಗಲಿಲ್ಲ. ದಯವಿಟ್ಟು ನನ್ನನ್ನ ಕ್ಷಮಿಸಿ, ಆ ಮಾತುಗಳನ್ನೆಲ್ಲಾ ನಾನು ವಾಪಾಸ್ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ ಏನೋ ತಪ್ಪಾಗಿ ಹೇಳಿಬಿಟ್ಟಿದ್ದೀನಿ ಎಂದಿದ್ದಾರೆ.
ಶಿವರಾಜ್ಕುಮಾರ್ ಅವರು ಕೂಡ ನಮಗೆ ಎಷ್ಟೋ ಸಹಾಯ ಮಾಡಿದ್ದಾರೆ. ಐದು ಸಿನಿಮಾ ಮಾಡಿದ್ದೀನಿ. ಅವರ ಉಪಕಾರವನ್ನ ನಾವು ಯಾವತ್ತೂ ಮರೆಯೋದಿಲ್ಲ. ನಿಮಗೆಲ್ಲಾ ಗೊತ್ತು ನಾನು ವಿದ್ಯಾವಂತ ಅಲ್ಲ. ಮನಸ್ಸಲ್ಲಿ ಏನಿತ್ತೋ ಅದನ್ನ ಹೇಳಿಬಿಟ್ಟಿದ್ದೀನಿ. ಶಿವಣ್ಣ ದಯವಿಟ್ಟು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ – ನಿಮ್ಮ ಜೊತೆ ನಾನಿನ್ನೂ ಸಿನಿಮಾ ಮಾಡ್ಬೇಕು.











