ಬಂಟ್ವಾಳ: ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಸುಳ್ಳಮಲೆ ಗುಹಾತೀರ್ಥ ಸ್ನಾನವು ಸೆ.11ರಿಂದ 14ರವರೆಗೆ ನಡೆಯಲಿದೆ.
ಭಾದ್ರಪದ ಶುಕ್ಲ ಚೌತಿಯವರೆಗೆ ನಡೆಯುವ ಈ ತೀರ್ಥಸ್ನಾನಕ್ಕೆ ಪೂರ್ವಭಾವಿಯಾಗಿ ಸೋಣ ಅಮಾವಾಸ್ಯೆಯಂದು ಬಿದಿರಿನ ಕೇರ್ಪು (ಏಣಿ) ಇಡುವ ಸಂಪ್ರದಾಯ ನೆರವೇರಿದೆ. ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಹಾಗೂ ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಸಲ್ಲಿಸಿದ ನಂತರ ಭಕ್ತಾದಿಗಳಿಗೆ ಗುಹಾತೀರ್ಥ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ತೀರ್ಥಸ್ನಾನಕ್ಕೆ ಆಗಮಿಸುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಧಾರ್ಮಿಕ ಸಂಪ್ರದಾಯವನ್ನು ಕಾಪಾಡುವಂತೆ ಮನವಿ ಮಾಡಲಾಗಿದೆ.
ಅಲ್ಲದೆ, ಸುಳ್ಳಮಲೆ ಗುಹಾತೀರ್ಥದ ಒಳಭಾಗದಲ್ಲಿ ಛಾಯಾಗ್ರಹಣ ಮತ್ತು ವಿಡಿಯೋ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ತೀರ್ಥಸ್ನಾನಕ್ಕೆ ಆಗಮಿಸುವ ಭಕ್ತಾದಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮಾಣಿ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿ ಅವರು ಭಕ್ತಾದಿಗಳಲ್ಲಿ ಈ ಮನವಿ ಮಾಡಿದ್ದಾರೆ.












