ಸೆ.20 ರಂದು ಎಂಜಿನಿಯರ್ಸ್ ಡೇ ಸಮಾರಂಭ

ಪುತ್ತೂರು, ಸೆ. 12: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್(ಇಂಡಿಯಾ) ಪುತ್ತೂರು ಸೆಂಟರ್ ವತಿಯಿಂದ ಎಂಜಿನಿಯರ್ಸ್ ಡೇ ಸಮಾರಂಭ ಸೆ. 20ರಂದು ಸಂಜೆ 5ಕ್ಕೆ ಪುತ್ತೂರು ದರ್ಬೆಯ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಎಸಿಸಿಇ(ಐ) ಅಧ್ಯಕ್ಷ ಶಿವರಾಮ ಎಂ.ಎಸ್. ತಿಳಿಸಿದರು.
ಅವರು ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಎಂಜಿನಿಯರ್‌ಗಳ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಸಂಸ್ಥೆಯ ಪುತ್ತೂರು ವಿಭಾಗದಲ್ಲಿ 170 ಮಂದಿ ಸದಸ್ಯರಿದ್ದಾರೆ. ಸಮಾರಂಭವನ್ನು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸತೀಶ್ ಭಟ್ ಉದ್ಘಾಟಿಸಲಿದ್ದು, ಮಂಗಳೂರು ಎನ್.ಎಂ.ಪಿ.ಟಿ.ಯ ತಾಂತ್ರಿಕ ಸಲಹೆಗಾರ ಡಾ.ದಯಾನಂದ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಜೊತೆಗೆ ಸಮಾರಂಭದಲ್ಲಿ ಇಬ್ಬರು ಎಂಜಿನಿಯರ್ ಗಳಾದ ಕೇಶವ ಭಟ್ ಹಾಗೂ ಆಲಿ ಕುಂಞಿ ಅವರನ್ನು ಸಮ್ಮಾನಿಸಲಾಗುತ್ತದೆ. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದಲ್ಲಿ ಹೆಚ್ಚಿನ ಅಂಕ ಪಡೆದ ಇಬ್ಬರು ಸಿವಿಲ್ ಎಂಜಿನಿಯರ್ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ. ಜತೆಗೆ ಸಂಸ್ಥೆಯ ಸದಸ್ಯರಿಗೆ ಇನ್ ಸ್ಟಾ ಎಂಜಿನಿಯರ್ ಅವಾರ್ಡ್ ನೀಡಲಿದ್ದೇವೆ ಎಂದರು.
ದಿನಾಚರಣೆಯ ಅಂಗವಾಗಿ ಸಂಸ್ಥೆಯ ಸದಸ್ಯರು ಹಾಗೂ ಮಕ್ಕಳಿಗೆ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಆಯೋಜಿಸಲಾಗಿದೆ. ಸೆ. 15ರಂದು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಶಾಲೆಗಳ 3ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಸ್ಪರ್ಧೆಗಳನ್ನು ನಡೆಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಕಾವ್ಯಶ್ರೀ, ಸದಸ್ಯರಾದ ಶಿವಪ್ರಸಾದ್, ನವಿತಾ ಉಪಸ್ಥಿತರಿದ್ದರು.

Advertisement

Share this article

You cannot copy content of this page