ಎರಡು ತಿಂಗಳ ಮನೆ ಬಾಡಿಗೆ ಕೇಳಿದ್ದಕ್ಕೆ ಗುಂಡಿಕ್ಕಿ ಹತ್ಯೆ! ಬೆಂಗಳೂರು ಮನೆ ಮಾಲಿಕರೇ ಹುಷಾರ್!!

ಬೆಂಗಳೂರು : ಎರಡು ತಿಂಗಳ ಮನೆ ಬಾಡಿಗೆ 10 ಸಾವಿರ ರೂಪಾಯಿ ಕೊಡದ ಕಾರಣಕ್ಕೆ ತಮಗೆ ಬೈದಿದ್ದಕ್ಕಾಗಿ ಬಿಹಾರ ಮೂಲದ ಇಬ್ಬರು ಸ್ವಿಗ್ಗಿ ಫುಡ್‌ಡೆಲವರಿ ಹುಡುಗರು ತಮ್ಮ ಮಾಲೀಕನಿಗೆ ಗುಂಡಿಟ್ಟು ಕೊಂದು ಪರಾರಿ ಆಗಿರುವ ಘಟನೆ ನಗರದಲ್ಲಿ ನಡೆದಿದೆ. ಪಟ್ಟಂದೂರು ಅಗ್ರಹಾರದ ನಿವಾಸಿ ವಕೀಲ ಮಂಜುನಾಥ್ (42) ಮೃತ ಮಾಲೀಕ. ಆರೋಪಿಗಳಾದ ಪವನ್ ದುಬೆ ಹಾಗೂ ಅಮಿತ್ ದುಬೆ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Advertisement

ಬಾಡಿಗೆ ಕೊಡುವ ನೆಪದಲ್ಲಿ ಭಾನುವಾರ ರಾತ್ರಿ ಮಂಜುನಾಥ್ ಅವರ ಮನೆಗೆ ತೆರಳಿ ಹಣೆಗೆ ಗುಂಡಿಟ್ಟು ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಹಾರದಿಂದ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ ಪವನ್ ಹಾಗೂ ಅಮಿತ್, ಬಳಿಕ ನಗರದಲ್ಲಿ ಸ್ವಿಗ್ಗಿ ಆ್ಯಪ್‌ನಲ್ಲಿ ಫುಡ್ ಡೆಲವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ 1.5 ವರ್ಷದಿಂದ ಪಟ್ಟಂದೂರು ಅಗ್ರಹಾರದಲ್ಲಿ ವಕೀಲ ಮಂಜುನಾಥ್ ಅವರಿಗೆ ಸೇರಿದ ಶೆಡ್‌ನಲ್ಲಿ (ಸೀಟಿನ ಪುಟ್ಟ ಮನೆ) ಆ ಹುಡುಗರು ನೆಲೆಸಿದ್ದರು. ಆ ಶೆಡ್‌ಗೆ ಮಾಸಿಕ 5 ಸಾವಿರ ರು. ಬಾಡಿಗೆ ನಿಗದಿಯಾಗಿತ್ತು.

Advertisement
Advertisement

ಆದರೆ 2 ತಿಂಗಳಿಂದ ಬಾಡಿಗೆ ಕೊಡದ ಕಾರಣಕ್ಕೆ ಪವನ್ ಹಾಗೂ ಅಮಿತ್‌ಗೆ ಮಂಜುನಾಥ್ ತೀವ್ರ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಕೆರಳಿದ ಆರೋಪಿಗಳು, ಮಂಜುನಾಥ್ ಹತ್ಯೆಗೆ ಮುಂದಾಗಿದ್ದಾರೆ. ಅಂತೆಯೇ ಅವರಿಗೆ ರಾತ್ರಿ 10.30ರಲ್ಲಿ ಕರೆ ಮಾಡಿ ಬಾಡಿಗೆಯನ್ನು ಫೋನ್ ಪೇ ಮಾಡುತ್ತೇವೆ ಎಂದಿದ್ದಾರೆ. ಆದರೆ ರಾತ್ರಿ 11.30ರಲ್ಲಿ ಮತ್ತೆ ಮಂಜುನಾಥ್ ಅವರಿಗೆ ಕರೆ ಮಾಡಿ ತಾಂತ್ರಿಕ ಸಮಸ್ಯೆಯಿಂದ ಫೋನ್‌ ಪೇ ನಲ್ಲಿ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ನಾವೇ ಮನೆಗೆ ಬಂದು ಕೊಡುತ್ತೇವೆ ಎಂದಿದ್ದಾರೆ. ಈ ಮಾತಿಗೆ ಮಂಜುನಾಥ್ ಸಮ್ಮತಿಸಿದ್ದಾರೆ. ಅದರಂತೆ ಕೆಲ ನಿಮಿಷದಲ್ಲಿ ಮಂಜುನಾಥ್ ಮನೆಗೆ ಪ್ರತ್ಯೇಕ ಬೈಕ್‌ಗಳಲ್ಲಿ ಇಬ್ಬರು ತೆರಳಿದ್ದಾರೆ. 5 ಅಂತಸ್ತಿನ ಕಟ್ಟಡದಲ್ಲಿ 2ನೇ ಮಹಡಿಯಲ್ಲಿ ಮಂಜುನಾಥ್ ನೆಲೆಸಿದ್ದರು. ಒಬ್ಬಾತ 5 ಸಾವಿರ ರೂ. ಹಣವನ್ನು ಕೊಟ್ಟಿದ್ದಾನೆ. ಆತನಿಂದ ಹಣ ಪಡೆದು ಹಣ ಎಣಿಸುವ ಹೊತ್ತಿಗೆ ಸರಿಯಾಗಿ ಮಂಜುನಾಥ್ ಅವರ ಹಣೆಗೆ ಮತ್ತೊಬ್ಬ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಈ ಗುಂಡಿನ ಸದ್ದು ಕೇಳಿ ಮಂಜುನಾಥ್ ಕುಟುಂಬದವರು ಹೊರ ಬರುವ ವೇಳೆಗೆ ಆರೋಪಿಗಳು ಕಾಲ್ಕತ್ತಿದ್ದಾರೆ ಎಂದು ವರದಿಯಾಗಿದೆ.

ಮನೆಯ ರೂಮ್‌ನಲ್ಲಿದ್ದ ಮೃತನ ಪತ್ನಿ ಹಾಗೂ ಮಕ್ಕಳು, ತಕ್ಷಣವೇ ಮಂಜುನಾಥ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page