ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಎಂಬಲ್ಲಿ ನಡೆದ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿದ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದೆ. ತೋಟಕ್ಕೆ ಬರುವ ಹಂದಿಗಳನ್ನು ತಡೆಯಲು ತೋಟದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿದ ಹಿನ್ನಲೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ತೋಟದ ಮಾಲಿಕನನ್ನು ಬಂಧಿಸದೇ ಇರೋದು ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಟೋಬರ್ 12 ರಂದು ರಾತ್ರಿ ಈ ಘಟನೆ ನಡೆದಿದ್ದು, ದೈವ ನರ್ತಕರಾದ ಸ್ಥಳೀಯ ಕಲ್ಮಡ್ಕದ ಬೊಮ್ಮೆಟ್ಟಿ ಬಾಬು ಸೀತಾ ದಂಪತಿಗಳ ಪುತ್ರ 28 ವರ್ಷ ಪ್ರಾಯದ ಭರತ್ ಮತ್ತು ಭರತ್ ನ ಸಹೋದರಿ ಭವ್ಯಾ ರವರ ಪತಿ, ಬೆಳ್ತಂಗಡಿ ತಾಲೂಕಿನ ಮುಂಗೆಲು ವೀರಪ್ಪ ಮತ್ತು ಸೀತಮ್ಮ ದಂಪತಿಗಳ ಪುತ್ರ 34 ವರ್ಷ ಪ್ರಾಯದ ಗಣೇಶ್ ಹಾಗು ಅವರ ಸಂಬಂಧಿ ಬಾಲಕ ಸಿಂಚನ್ ಮೂವರು ರಾತ್ರಿ 10.30 ರ ವೇಳೆಗೆ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರ ಇರುವ ತೋಡಿಗೆ ಮೀನು ಹಿಡಿಯಲೆಂದು ಹೋಗಿದ್ದರು. ಪ್ರತೀ ವರ್ಷವೂ ಮೀನು ಹಿಡಿಯಲೆಂದು ಈ ತೋಡಿಗೆ ಹೋಗುತ್ತಿದ್ದ ಈ ಯುವಕರು ಅಂದು ಕೂಡಾ ತೋಡಿನ ಬಳಿ ಹೋಗಿದ್ದಾರೆ. ಮೀನಿಗಾಗಿ ನೀರಿನಲ್ಲಿ ಹುಡುಕಾಟ ನಡೆಸುತ್ತಿರುವ ಸಂದರ್ಭದಲ್ಲಿ ಈ ಯುವಕರಿಗೆ ತೋಡಿನ ಮೇಲ್ಬಾಗದಲ್ಲಿ ತಂತಿಯನ್ನು ಕಟ್ಟಿ, ಅದಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಇದನ್ನು ಗಮನಿಸದ ಭರತ್ ಹಾಗೂ ಗಣೇಶ್ ರವರು ತಂತಿಯನ್ನು ದಾಟುವ ಸಂದರ್ಭದಲ್ಲಿ ದಾಟಿದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಬಾಲಕ ಸಿಂಚನ್ ರಿಗೂ ತಂತಿ ತಾಗಿದ್ದು ಅವರು ವಿದ್ಯುತ್ ನ ರಭಸಕ್ಕೆ ದೂರ ಎಸೆಯಲ್ಪಟ್ಟಿದ್ದರು. ಸಿಂಚನ್ ಕೈ, ಎದೆ, ಕಾಲಿಗೆ ಸುಟ್ಟ ಗಾಯಗಳಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ತಿಳಿದ ತಕ್ಷಣವೇ ವಿದ್ಯುತ್ ತಂತಿಯನ್ನು ಹರಿಸಿದ್ದ ಸ್ಥಳೀಯ ತೋಟದ ಮಾಲಕ ಮಧುಸೂಧನ್ ಭಟ್ ತಂತಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಬೆಳ್ಳಾರೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಕಾರ್ಯ ನಡೆಸಿದ್ದು, ಈ ಸಂಬಂಧ ತೋಟದ ಮಾಲಿಕ ಮಧುಸೂಧನ್ ಭಟ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಆದರೆ ದೂರು ದಾಖಲಿಸಿದ ಬಳಿಕ ತೋಟದ ಮಾಲಿಕ ಮಧುದೂಧನ್ ಭಟ್ ಅವರನ್ನು ಬಂಧಿಸದೇ ಇರೋದನ್ನು ವಿರೋಧಿಸಿ ದಲಿತಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದೆ. ಅಕ್ಟೋಬರ್ 22 ಗುರುವಾರದವರೆಗೆ ಆರೋಪಿ ಮಧುಸೂಧನ್ ಭಟ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಬೆಳ್ಳಾರೆ ಪೋಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆಗೂ ಮುಂದಾಗಿವೆ.
ಈ ಕುರಿತು ಮಾತನಾಡಿದ ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಸಾವನ್ನಪ್ಪಿದ ಗಣೇಶ್ ಮತ್ತು ಭರತ್ ಇಬ್ಬರೂ ದೈವ ನರ್ತಕರಾಗಿದ್ದು, ಗುಳಿಗ, ಕಲ್ಲುರ್ಟಿ ಮೊದಲಾದ ದೈವಗಳ ನರ್ತನ ಸೇವೆಯನ್ನು ಮಾಡಿಕೊಂಡಿದ್ದರು. ಭರತ್ ಓರ್ವ ಪ್ರತಿಭಾವಂತ ಕ್ರಿಕೆಟ್ ಆಟಗಾರನೂ ಆಗಿದ್ದು, ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಆಡಿದ ಪ್ರತಿಭಾನ್ವಿತ ಆಟಗಾರನೂ ಆಗಿದ್ದ. ಅಲ್ಲದೆ ಮನೆಯ ಆಸರೆಯೂ ಆತನೇ ಆಗಿದ್ದಾನೆ. ಅಲ್ಲದೆ ಗಣೇಶ್ ಗೆ ಮೂರು ವರ್ಷದ ಹೆಣ್ಣು ಮಗಳಿದ್ದು, ಇಬ್ಬರ ಆಕಸ್ಮಿಕ ಸಾವು ಎರಡೂ ಮನೆಯನ್ನು ಬೀದಿಪಾಲಾಗುವಂತೆ ಮಾಡಿದೆ. ಇದರಿಂದ ತೋಟದ ಮಾಲಿಕ ಮಧುಸೂಧನ್ ಭಟ್ ಅವರನ್ನು ಬಂಧಿಸಬೇಕು. ಸರಕಾರದ ವತಿಯಿಂದ ಮಾನವೀಯತೆಯ ನೆಲೆಯಲ್ಲಿ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕೆಂದು ದಲಿತ ಸಂಘಟನೆಗಳು ಒತ್ತಾಯಿಸಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ಅಧೀಕ್ಷಕರ ಕಛೇರಿಗೂ ಮುತ್ತಿಗೆ ಹಾಕಲು ತೀರ್ಮಾನಿಸಿದೆ.
ತೋಟಕ್ಕೆ ಹಂದಿಗಳ ಕಾಟ ಇದ್ದ ಕಾರಣಕ್ಕೆ ಮಧುಸೂಧನ್ ಭಟ್ ಕಲ್ಮಡ್ಕದ ವ್ಯಕ್ತಿಯೋರ್ವನ ಮೂಲಕ ವಿದ್ಯುತ್ ತಂತಿಯನ್ನು ಹರಿಸಿದ್ದರು. ಪೋಲೀಸರು ವಿದ್ಯುತ್ ತಂತಿ ಹರಿಸಿದ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಗೆ ಸೂಚನೆ ನೀಡಿದ ಮಧುಸೂಧನ್ ಭಟ್ ಅವರನ್ನೂ ಬಂಧಿಸುವಂತೆ ಒತ್ತಾಯಿಸಿ ದಲಿತ ಸೇವಾ ಸಮಿತಿ ಮತ್ತು ನಲಿಕೆಯವರ ಸಂಘ ಸರಕಾರ ಮತ್ತು ಪೋಲೀಸ್ ಇಲಾಖೆಯನ್ನು ಒತ್ತಾಯಿಸಲಾರಂಭಿಸಿದೆ.
ವರದಿ : ಅನಿಶ್ ಕುಮಾರ್, ಪುತ್ತೂರು.














