ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಗುರುವಾರ ರಾತ್ರಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 16 ಮಂದಿ ಬಲಿಯಾಗಿದ್ದು, 65 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಬೆಟ್ನ ನಾಗ್ಕು ನಗರದ ಬಾಕೆನ್ ಕೌಂಟಿಯಲ್ಲಿ ಗುರುವಾರ ರಾತ್ರಿ ಸುಮಾರು 10.33ರ ವೇಳೆಗೆ ಭೂಕಂಪ ಸಂಭವಿಸಿದೆ ಎಂದು ನಗರದ ಭೂಕಂಪ ಪರಿಹಾರ ಕಾರ್ಯಾಚರಣೆ ಕೇಂದ್ರ ಮಾಹಿತಿ ನೀಡಿದೆ.
ಭೂಕಂಪದಲ್ಲಿ ಗಾಯಗೊಂಡ 65 ಮಂದಿಯ ಪೈಕಿ 11 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಭೂಕಂಪದ ತೀವ್ರತೆಗೆ 330ಕ್ಕೂ ಅಧಿಕ ಮನೆಗಳು ಕುಸಿದಿವೆ ಅಥವಾ ಹಾನಿಗೊಳಗಾಗಿವೆ. ಪ್ರಬಲ ಭೂಕಂಪದ ಹಿನ್ನೆಲೆಯಲ್ಲಿ ಟಿಬೆಟ್ ಪ್ರಾದೇಶಿಕ ವಿಪತ್ತು ತಡೆಗಟ್ಟುವಿಕೆ, ಅಪಾಯ ತಗ್ಗಿಸುವಿಕೆ ಮತ್ತು ಪರಿಹಾರ ಸಮಿತಿಯು ಶುಕ್ರವಾರ ನೈಸರ್ಗಿಕ ವಿಪತ್ತು ಪರಿಹಾರಕ್ಕಾಗಿ ಮೂರನೇ ಹಂತದ (ಲೆವೆಲ್-3) ತುರ್ತು ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಿದೆ.














