ಪುತ್ತೂರು : ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ, ಸಮುದಾಯದತ್ತ ಸಾಂತ್ವನ ಸಂವಾದದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆರಂಭದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಂದಾಯ ಇಲಾಖೆಯ ಗ್ರಾಮ ಸಹಾಯಕ ಬಾಲಕೃಷ್ಣ ಗೌಡ ಅವರು ಸೇವೆಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಜನರ ಗೊಂದಲಗಳ ಬಗ್ಗೆ, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಸೌಮ್ಯ ಅವರು ಆಯುಷ್ಮಾನ್ ಭಾರತ್ ಆಭಾ ಯೋಜನೆಯ ಬಗ್ಗೆ, ಪ್ರದೇಶದಲ್ಲಿ ಒಟ್ಟು ಆಯುಷ್ಮಾನ್ ಆಗಿರುವ, ಸೇವೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಯಶೋಧ ಕೆ. ಭಾಗವಹಿಸಿ ಇಲಾಖೆಯ ಸೇವೆಗಳು ಮತ್ತು ಹೊಸ ಯೋಜನೆಗಳು, ಗೃಹಲಕ್ಷ್ಮಿ ಯೋಜನೆಯ ಮಾಹಿತಿಯನ್ನು ನೀಡಿದರು. ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾನೂನಿನ ಅರಿವು, ಮತ್ತು ಸೇವೆಗಳ ಬಗ್ಗೆ ಪ್ಯಾನೆಲ್ ವಕೀಲೆ ಭಾರತಿ ಎ. ವಿವರಣೆಯನ್ನು ನೀಡಿದರು. ಸಾಂತ್ವನ ಕೇಂದ್ರದ ಮೂಲಕ ವಿವಾಹ ಪೂರ್ವ ಸಂವಾದ ಹಾಗೂ ದೌರ್ಜನ್ಯ ಮುಕ್ತ ಗ್ರಾಮದ ಬಗ್ಗೆ ಸಂವಾವನ್ನು ಪುತ್ತೂರು ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಹಾಘೂ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನಶೆಟ್ಟಿ ಭಾಗವಹಿಸಿ ಗ್ರಾಮ ಸ್ವರಾಜ್ ಅಭಿಯಾನದ ಮೂಲಕ ಸರಕಾರಿ ಶಾಲೆ, ಸರಕಾರಿ ಆಸ್ಪತ್ರೆ, ಅಂಗನವಾಡಿ ಕೇಂದ್ರಗಳು ಮಾದರಿ ಆಗುವಂತೆ ಹಾಗೂ ಸಂಪೂರ್ಣ ಸ್ವಚ್ಛ ಮನೆ ಸ್ವಚ್ಛ ಗ್ರಾಮದ ಕಲ್ಪನೆ ಮೂಲಕ ಜನರು ಪ್ರಯತ್ನಿಸಿ ಇಡೀ ದೇಶವು ಪಡ್ನೂರು ಗ್ರಾಮವನ್ನು ನೋಡುವ ಹಾಗೆ ಅಭಿವೃದ್ಧಿ ಕಡೆಗೆ ಕೊಂಡೊಯ್ಯಬಹುದಾದ ಜವಾಬ್ದಾರಿಯ ಬಗ್ಗೆ ತಿಳಿಸಿದರು.














