ಬಿಷ್ಣೋಯ್‌ ಗ್ಯಾಂಗ್‌ ಬದ್ಧ ವೈರಿ ಹಿಮಾಂಶು ಭಾವು ಬಂಧನ!! ಈತನ ಪ್ರಕರಣಗಳ ಹಿನ್ನಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!!

ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳಲ್ಲಿ ಒಬ್ಬನಾಗಿರುವ ಹರಿಯಾಣ ಮೂಲದ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಾದ ಹಿಮಾಂಶು ಭಾವು ಮತ್ತು ನೀರಜ್ ಫರೀದ್‌ಪುರಿಯಾ ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವುದಾಗಿ ವರದಿಯಾಗಿದೆ. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಆತನನ್ನು ಬಂಧಿಸಿದೆ ಎಂದು ವರದಿಯಾಗಿದೆ. ಹಿಮಾಂಶು ಭಾವು ವಿರುದ್ಧ ದೆಹಲಿ ಮತ್ತು ಹರಿಯಾಣದಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹರಿಯಾಣ ವಿಶೇಷ ಕಾರ್ಯಪಡೆಯು ನೀಡಿದ ಮಾಹಿತಿಯ ಮೇರೆಗೆ, ಯುಎಸ್ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಸಂಸ್ಥೆಯ ನೆರವಿನೊಂದಿಗೆ, ಅಕ್ಟೋಬರ್ 22 ರಂದು ಲಾಸ್ ವೇಗಾಸ್‌ನಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Advertisement

ಹಿಮಾಂಶು ರಿಟೋಲಿಯಾ ಎಂಬುದು ಭಾವುನ ನಿಜವಾದ ಹೆಸರಾಗಿದ್ದು, ಈತ ಹರಿಯಾಣದ ರೋಹ್ಟಕ್ ಜಿಲ್ಲೆಯ ರಿಟೋಲಿ ಗ್ರಾಮದ ನಿವಾಸಿಯಾಗಿದ್ದಾನೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೂ ದಿಲ್ಲಿ-ಎನ್‌ಸಿಆರ್, ಹರಿಯಾಣ ಮತ್ತು ಪಂಜಾಬ್‌ನಲ್ಲಿ ತನ್ನದೇ ಆದ ಅಪರಾಧ ಜಾಲವನ್ನು ನಿರ್ಮಿಸಿ, ಅಲ್ಲಿಂದಲೇ ಅದನ್ನು ನಿಯಂತ್ರಿಸುತ್ತಿದ್ದ ಆರೋಪ ಈತನ ಮೇಲಿದೆ.ಭಾರತೀಯ ತನಿಖಾ ಸಂಸ್ಥೆಗಳ ಮನವಿಯ ಮೇರೆಗೆ 2023ರ ಆಗಸ್ಟ್‌ನಲ್ಲಿ ಇಂಟರ್‌ಪೋಲ್ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ, ದಿಲ್ಲಿ ಪೊಲೀಸ್ ಮತ್ತು ಹರಿಯಾಣ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿಯೂ ಈತನ ಹೆಸರಿದೆ. 2002ರಲ್ಲಿ ಜನಿಸಿದ ಹಿಮಾಂಶು ಭಾವು, ಹರಿಯಾಣದ ಸಂಘಟಿತ ಅಪರಾಧ ಜಾಲದಲ್ಲಿ ಗುರುತಿಸಿಕೊಂಡಿರುವ ಅತ್ಯಂತ ಕಿರಿಯ ವಯಸ್ಸಿನ ಗ್ಯಾಂಗ್‌ಸ್ಟರ್‌ಳಲ್ಲಿ ಒಬ್ಬನಾಗಿದ್ದಾನೆ. ಹದಿಹರೆಯದಲ್ಲೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದ್ದು, 2020ರಲ್ಲಿ ಇತರ ಕೈದಿಗಳೊಂದಿಗೆ ಬಾಲಾಪರಾಧಿಗಳ ಸುಧಾರಣಾ ಕೇಂದ್ರದಿಂದ ಪರಾರಿಯಾಗಿದ್ದ. ಕೊಲೆ, ಕೊಲೆ ಯತ್ನ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಹಾಗೂ ಕ್ರಿಮಿನಲ್ ಸಂಚು ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತನ ಕೈವಾಡವಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ. ಹಲವು ರಾಜ್ಯಗಳಿಗೆ ತನ್ನ ಅಪರಾಧ ಚಟುವಟಿಕೆಗಳನ್ನು ವಿಸ್ತರಿಸಿದ್ದ ಭಾವು, ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿನ ತನ್ನ ಸಹಚರರ ಮೂಲಕ ಅಪರಾಧ ಕೃತ್ಯಗಳನ್ನು ಸಂಘಟಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಹಿಮಾಂಶು ಭಾವು ಕುಖ್ಯಾತ ನೀರಜ್ ಬವಾನಾ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಅಲ್ಲದೆ, ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ನೇತೃತ್ವದ ಅಪರಾಧ ಜಾಲದೊಂದಿಗೆ ಈತನ ಗ್ಯಾಂಗ್ ತೀವ್ರ ವೈರತ್ವ ಹೊಂದಿದ್ದು, ಉಭಯ ಗುಂಪುಗಳ ನಡುವೆ ಹಿಂಸಾತ್ಮಕ ಸಂಘರ್ಷಗಳು ನಡೆದಿರುವುದಾಗಿ ವರದಿಗಳು ತಿಳಿಸಿವೆ. ಹರಿಯಾಣದ ಪಲ್ವಾಲ್ ಜಿಲ್ಲೆಯ ನಿವಾಸಿಯಾಗಿರುವ ನೀರಜ್ ಫರೀದ್‌ಪುರಿಯಾ ಬಂಧನದ ವೇಳೆಯಲ್ಲಿ ಅಮೆರಿಕದಲ್ಲಿ ನೆಲೆಸಿದ್ದ. ಈತನ ವಿರುದ್ಧ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

Advertisement
Advertisement

2012ರಲ್ಲಿ ನಡೆದ ಎನ್ಕೌಂಟರ್ ಬಳಿಕ ಹರಿಯಾಣ ಪೊಲೀಸರು ನೀರಜ್‌ನನ್ನು ಬಂಧಿಸಿದ್ದರು. 2015ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, 2019ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿತ್ತು. 2019ರ ಜೂನ್‌ಲ್ಲಿ ಫರೀದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಅವರ ಹತ್ಯೆ ಪ್ರಕರಣದಲ್ಲಿಯೂ ನೀರಜ್ ಹೆಸರು ಕೇಳಿಬಂದಿತ್ತು. ಈ ಘಟನೆ ಬಳಿಕ ಆತ ದುಬೈ ಮಾರ್ಗವಾಗಿ ಕೆನಡಾಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ.
ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರತಿಸ್ಪರ್ಧಿಯಾಗಿರುವ ಬಾಂಬಿಹಾ ಗ್ಯಾಂಗ್‌ನ ಕೆನಡಾ ಘಟಕದ ಜವಾಬ್ದಾರಿಯನ್ನು ನೀರಜ್‌ಗೆ ವಹಿಸಲಾಗಿತ್ತು. ಅನಂತರ ಅಮೆರಿಕಕ್ಕೆ ತೆರಳಿದ್ದ ನೀರಜ್, ಅಲ್ಲಿ ಹಿಮಾಂಶು ಭಾವು ಗ್ಯಾಂಗ್ ಜತೆ ಸೇರಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಇದಲ್ಲದೆ, ಖ್ಯಾತ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಘಟನೆಯ ಹೊಣೆಯನ್ನೂ ನೀರಜ್ ಫರೀದ್‌ಪುರಿಯಾ ಹೊತ್ತುಕೊಂಡಿದ್ದ ಎಂದು ವರದಿಗಳು ತಿಳಿಸಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page