ಸಭ್ಯತೆಯ ಮುಖವಾಡ ಧರಿಸುವ ನಾಟಕ ಸಾಕು!! ರಘುಪತಿ ಭಟ್ ವಿರುದ್ಧ ಉಡುಪಿ ಬಿಜೆಪಿ ಕಾರ್ಯಕರ್ತನ ಆಕ್ರೋಶ!!

ಉಡುಪಿ: ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ರಘುಪತಿ ಭಟ್, ಇದೀಗ ಮತ್ತೆ ಪಕ್ಷಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿರುವುದಕ್ಕೆ ಉಡುಪಿ ಭಾಗದ ಬಿಜೆಪಿ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಖಾಸಗಿ ಯೂಟ್ಯೂಬ್ ವಾಹಿನಿಗೆ ರಘುಪತಿ ಭಟ್ ನೀಡಿದ್ದ ಸಂದರ್ಶನ ಫೇಸ್‌ಬುಕ್‌ನಲ್ಲಿ ಹಂಚಿಕೆಯಾಗಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಕಾರ್ಯಕರ್ತರು, “ಒಂದು ಕಾಲದಲ್ಲಿ ಬೂತ್ ಮಟ್ಟದಲ್ಲಿ ಬಿಜೆಪಿ ಪರ ಮತ ಕೇಳುವುದಕ್ಕೂ ಎದುರಾಳಿ ಪಕ್ಷಗಳ ಬೆದರಿಕೆ ಎದುರಿಸಬೇಕಾದ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತಕ್ಕಾಗಿ ಜೀವದ ಹಂಗು ತೊರೆದು ದುಡಿದ ಕಾರ್ಯಕರ್ತರು ಹಾಗೂ ಪ್ರಾಣವನ್ನೇ ಬಲಿಕೊಟ್ಟ ಸಂಘಟನೆಯ ಕಾರ್ಯಕರ್ತರ ತ್ಯಾಗದ ಫಲವಾಗಿ ನೀವು ಮೂರು ಬಾರಿ ಶಾಸಕರಾಗಲು ಸಾಧ್ಯವಾಯಿತು” ಎಂದು ಕಿಡಿಕಾರಿದ್ದಾರೆ.

Advertisement
Advertisement

“ಕಾರ್ಯಕರ್ತರ ತ್ಯಾಗದಿಂದ ಅಧಿಕಾರ ಅನುಭವಿಸಿದ ನೀವು, ನಿಮ್ಮ ವಿರುದ್ಧದ ವಿವಾದಗಳು ಮತ್ತು ನ್ಯಾಯಾಲಯದ ತಡೆಯಾಜ್ಞೆಯ ವಿಚಾರಗಳು ಎದುರಾದಾಗಲೇ ಪಕ್ಷದ ಸಿದ್ಧಾಂತದ ಬಗ್ಗೆ ಏಕೆ ಯೋಚಿಸಲಿಲ್ಲ? ನಿಮ್ಮ ವೈಯಕ್ತಿಕ ನಡೆಗಳಿಂದ ಕಾರ್ಯಕರ್ತರು ತಲೆತಗ್ಗಿಸುವಂತಾದ ಸಂದರ್ಭಗಳ ಬಗ್ಗೆ ಈಗ ಮೌನವಾಗಿದ್ದು, ಮತ್ತೆ ಪಕ್ಷಕ್ಕೆ ಮರಳುವ ಮಾತುಗಳನ್ನಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ, ಅಧಿಕಾರ ಕಳೆದುಕೊಂಡ ನಂತರ ಉಂಟಾಗಿರುವ ರಾಜಕೀಯ ಶೂನ್ಯತೆ ನಿಮ್ಮನ್ನು ಕಾಡುತ್ತಿದೆಯೇ ಅಥವಾ ಗುತ್ತಿಗೆದಾರರಿಂದ ಕಮಿಷನ್ ಪಡೆಯುವ ಅವಕಾಶದ ಆಸೆಯೇ ಮತ್ತೆ ಕಾಡುತ್ತಿದೆಯೇ ಎಂಬ ವ್ಯಂಗ್ಯಭರಿತ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.

“ಏನೂ ಗೊತ್ತಿಲ್ಲದವರಂತೆ ಸಭ್ಯತೆಯ ಮುಖವಾಡ ಧರಿಸುವ ನಾಟಕ ಸಾಕು. ಕಾರ್ಯಕರ್ತರ ತ್ಯಾಗವನ್ನು ಮರೆತು ಅಧಿಕಾರಕ್ಕಾಗಿ ಪಕ್ಷದ ಬಾಗಿಲು ತಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂಬ ತೀಕ್ಷ್ಣ ಸಂದೇಶದೊಂದಿಗೆ ರಘುಪತಿ ಭಟ್ ಅವರ ನಡೆಗೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ನಾಯಕನ ಪಕ್ಷಾಂತರದ ರಾಜಕೀಯ ನಿಲುವು ಮತ್ತು ಮರುಪ್ರವೇಶದ ಪ್ರಯತ್ನದ ಬಗ್ಗೆ ಈ ಪ್ರತಿಕ್ರಿಯೆ ಉಡುಪಿ ಬಿಜೆಪಿಯೊಳಗಿನ ಅಸಮಾಧಾನದ ಧ್ವನಿಯಾಗಿ ಗಮನ ಸೆಳೆದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page