ಭಾರೀ ಹಿಮಪಾತದ ನಡುವೆ ನೇಪಾಳದ ಶೇ-ಫೋಕ್ಸುಂಡೋ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಸಿಲುಕಿರುವ ಆರು ಭಾರತೀಯ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಶನಿವಾರ ಮಧ್ಯಾಹ್ನದಿಂದ ಹಿಮಾವೃತ ಪ್ರದೇಶದಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಹಾಗೂ ಆಡಳಿತ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರವಾಸಿಗರು ಡೋಲ್ಪಾ ಜಿಲ್ಲೆಯ ಶೇ-ಫೋಕ್ಸುಂಡೋ ಗ್ರಾಮೀಣ ಪುರಸಭೆಯ ವಾರ್ಡ್ ಸಂಖ್ಯೆ 8ರ ಡೋ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಭಾರೀ ಹಿಮಪಾತದಿಂದ ಮಾರ್ಗಗಳು ಹಿಮದಿಂದ ಆವೃತವಾಗಿವೆ ಎಂದು ಜಿಲ್ಲಾ ಮುಖ್ಯ ಅಧಿಕಾರಿ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಅವರೊಂದಿಗೆ ತೆರಳಿದ್ದ ನೇಪಾಳಿ ಮಾರ್ಗದರ್ಶಿ ಎಚ್ಚರಿಕೆ ನೀಡಿದ್ದರೂ, ಪ್ರವಾಸಿಗರು ಸರೋವರದತ್ತ ಮುಂದುವರಿದಿದ್ದರು ಎನ್ನಲಾಗಿದೆ.
ಪ್ರವಾಸಿಗರು ಮಾರ್ಗದರ್ಶಿಯನ್ನು ಬಿಟ್ಟು ಮುಂದೆ ಸಾಗಿದ ಬಳಿಕ ಶನಿವಾರ ರಾತ್ರಿ ಅವರೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಸಂಜೆ ಮಾರ್ಗದರ್ಶಿ ಡೋಲ್ಪಾ ಜಿಲ್ಲಾ ಆಡಳಿತ ಕಚೇರಿಗೆ ಮಾಹಿತಿ ನೀಡಿ, ಹಿಮಪಾತದಿಂದ ಪ್ರವಾಸಿಗರು ಸಿಲುಕಿರುವ ಸಾಧ್ಯತೆ ವ್ಯಕ್ತಪಡಿಸಿದ್ದರು. ಭಾನುವಾರ ಬೆಳಿಗ್ಗೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು ಎಂದು ಮಾಧ್ಯಮಗಳು ಹೇಳಿವೆ.














