ಬೆಂಗಳೂರು : ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿಯ ವಿವಾಹ ಇತ್ತೀಚೆಗೆ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಅರ್ಜುನ್ ಸರ್ಜಾರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಉದ್ಯಮಿ ಇಸಾಯ್ ಅವರೊಂದಿಗೆ ವಿದೇಶದಲ್ಲಿ ವಿವಾಹವಾಗಿದ್ದಾರೆ. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹ ನಡೆಯಿತು ಎಂದು ತಿಳಿದು ಬಂದಿದೆ.
ಆದರೆ ಈ ಸಂಭ್ರಮದಲ್ಲಿ ಸರ್ಜಾ ಕುಟುಂಬದವರೇ ಆಗಿರುವ ಮೇಘನಾ ರಾಜ್ ಅವರು ಭಾಗಿಯಾಗಿರಲಿಲ್ಲ. ಅವರು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಧರ್ಮ ಪತ್ನಿ ಪ್ರೇರಣಾ ಅವರು ಮದುವೆಯಲ್ಲಿ ಭಾಗಿಯಾಗಿದ್ದರು. ಆದರೆ ಮೇಘನಾ ರಾಜ್ ಯಾಕೆ ಭಾಗಿಯಾಗಿಲ್ಲವೆನ್ನುವುದು ಚರ್ಚೆಗೆ ಕಾರಣವಾಗಿತ್ತು.
ಇದೀಗ ಈ ಕುರಿತು ಸ್ವತಃ ಮೇಘನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ʼʼನನ್ನನ್ನು ಮದುವೆಗೆ ಆಹ್ವಾನಿಸಲೇ ಇಲ್ಲ. ಧ್ರುವ – ಪ್ರೇರಣಾರನ್ನು ಆಹ್ವಾನಿಸಿದ್ದರು. ಹಾಗಾಗಿ ಅವರು ಹೋಗಿದ್ದರುʼʼ ಎಂದು ನೇರವಾಗಿ ಹೇಳಿದ್ದಾರೆ. ಯಾವ ಕಾರಣಕ್ಕಾಗಿ ಆಹ್ವಾನ ನೀಡಿಲ್ಲವೆನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಏಕೆ ಆಹ್ವಾನ ನೀಡಲಿಲ್ಲ ಎಂಬ ಈ ಪ್ರಶ್ನೆಯನ್ನು ನೀವು ಅವರಿಗೆ ಕೇಳಬೇಕು, ನನಗೆ ಕೇಳಬಾರದು’ ಎಂದಿದ್ದಾರೆ.















