ಪುತ್ತೂರು : ಕಬಡ್ಡಿ ಮಣ್ಣಿನ ಆಟ, ಆದರೆ ಕಾಲಕ್ಕೆ ತಕ್ಕಂತೆ ಪರಿವರ್ತನೆ ಹೊಂದಿ ಮ್ಯಾಟ್ ಅಂಕಣದಲ್ಲಿ ಆಡುವಂತಾಗಿದೆ, ನಿಯಮಗಳೂ ಬದಲಾಗಿದೆ. ಹೀಗಿದ್ದರೂ ಆಟದ ಗುಣಗಳು ಸಂಸ್ಕಾರಗಳು ಬದಲಾಗಿಲ್ಲ ಎಂದು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸುಜಿತ್ ಕುಮಾರ್ ಕೊಟ್ಟಾರಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆಯುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗ ಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತಾಡಿದರು. ಶಾರೀರಿಕ ಕ್ಷಮತೆ, ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಜಾಣತನ ಕಬಡ್ಡಿಗೆ ಆವಶ್ಯಕ. ಈ ಕ್ರೀಡೆಯಿಂದ ಪರಸ್ಪರ ಹೊಂದಾಣಿಕೆ, ಒಗ್ಗಟ್ಟು, ಮನೋಸ್ಥೈರ್ಯ ಮತ್ತು ನಾಯಕತ್ವ ಗುಣಗಳು ವೃದ್ದಿಸುತ್ತವೆ ಎಂದು ಹೇಳಿದರು. ಎದುರಾಳಿಗೆ ಗೌರವವನ್ನು ನೀಡುತ್ತಾ ಕ್ರೀಡಾಸ್ಪೂರ್ತಿಯಿಂದ ಆಟವನ್ನು ಆನಂದಿಸಿ. ಆಟದ ಸಮಯದಲ್ಲಿ ಗೆಲುವೊಂದೇ ಗುರಿಯಾಗಿರಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಚಿಪ್ಪಾರ್ ಶುಭ ಹಾರೈಸಿದರು.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ, ಕ್ರೀಡಾ ಸಂಯೋಜಕ ದಿನೇಶ್ ಪ್ರಸನ್ನ ವಂದಿಸಿದರು. ಮೂಲ ವಿಜ್ಞಾನ ಭಾಗದ ಸಹಾಯಕ ಪ್ರಾಧ್ಯಾಪಕಿ ಅನುಪಮಾ.ಟಿ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಮಹಿಳೆಯರ 7 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ.















