ಲೈಂಗಿಕ ಸಂತ್ರಸ್ತೆಯ ದೂರನ್ನು ಮುಚ್ಚಿ ಹಾಕಿದ್ದ ಕೃಪಾ ಆಳ್ವಾ! ರೋಚಕ ತಿರುವು ಪಡೆದ ಸ್ಟಿಂಗ್‌ ಆಪರೇಷನ್‌!!

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಹಾಗೂ ಗಂಭೀರ ತಿರುವು ಸಿಕ್ಕಿದೆ. ಲೈಂಗಿಕ ಕಿರುಕುಳಕ್ಕೊಳಗಾಗಿ ದೂರು ನೀಡಿದ್ದ ಸಂತ್ರಸ್ತೆಯ ದೂರನ್ನು ಕಾನೂನುಬದ್ಧವಾಗಿ ತನಿಖೆಗೆ ಒಳಪಡಿಸದೆ, ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ನಾಯಕಿ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿರುವುದಾಗಿ ವರದಿಯಾಗಿದೆ.

Advertisement

2015ರಿಂದ 2018ರವರೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕೃಪಾ ಆಳ್ವಾ ಈ ಕಳ್ಳಾಟ ನಡೆಸಿದ್ದಾರೆ ಎನ್ನಲಾಗಿದ್ದು, ಸದ್ಯ ಪ್ರಕರಣದ ವಿವರಗಳು ಹೊರಬರುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಕಾವೇರಿದೆ. ಕೃಪಾ ಆಳ್ವಾ ಆಯೋಗದ ಅಧ್ಯಕ್ಷೆಯಾಗಿದ್ದ ಸಮಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತ ಮಹಿಳೆಯೊಬ್ಬರು ಇ-ಮೇಲ್‌ ಮೂಲಕ ಅಧಿಕೃತವಾಗಿ ದೂರು ರವಾನಿಸಿದ್ದರು. ನಿಯಮಗಳ ಪ್ರಕಾರ ಬಂದ ದೂರನ್ನು ತಕ್ಷಣವೇ ಪೊಲೀಸರಿಗೆ ಹಸ್ತಾಂತರಿಸಿ, ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ಕೃಪಾ ಆಳ್ವಾ ನಿರ್ದೇಶನ ನೀಡಬೇಕಿತ್ತು. ಆದರೆ, ಸಂತ್ರಸ್ತೆಗೆ ರಕ್ಷಣೆ ನೀಡುವ ಬದಲು ಕಾನೂನಾತ್ಮಕ ಕ್ರಮಗಳನ್ನು ಬದಿಗೊತ್ತಿ ಪ್ರಕರಣಗಳನ್ನು ತಣ್ಣಗಾಗಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

Advertisement

2018ರಿಂದಲೂ ಕೃಪಾ ಆಳ್ವಾ ಅವರು ಕೇರಳ ಮೂಲದ ಈ ಸಂತ್ರಸ್ತ ಮಹಿಳೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಇಷ್ಟು ವರ್ಷಗಳ ನಂತರ, ಅಂದರೆ 2023ರಲ್ಲಿ ಕೃಪಾ ಆಳ್ವಾ ಅವರು ಸಂತ್ರಸ್ತೆಯ ಹೇಳಿಕೆಯನ್ನು ಪ್ರತ್ಯೇಕವಾಗಿ ವೀಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಕ್ಕಳ ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆ ಮಾಡಬೇಕಿದ್ದ ಉನ್ನತ ಹುದ್ದೆಯಲ್ಲಿದ್ದ ನಾಯಕೀಯೇ ಹೀಗೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದು ಮತ್ತು ವೀಡಿಯೋ ಹೇಳಿಕೆ ಪಡೆದಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ʼಸ್ಟಿಂಗ್‌ ಪ್ರಕರಣದʼ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ ಈ ಮಾಹಿತಿಗಳು ರಾಜಕೀಯ ನಾಯಕರ ನಿದ್ದೆಗೆಡಿಸಿವೆ ಎಂದು ಜಾಲತಾಣ ಮೂಲಗಳು ಹೇಳಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page