₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭದೊಂದಿಗೆ ಕ್ಯಾಂಪ್ಕೊ ದಾಖಲೆಯ ಸಾಧನೆ : ಎಸ್.ಆರ್. ಸತೀಶ್ಚಂದ್ರ

ಮಂಗಳೂರು: ಅಡಿಕೆ ಮಾರುಕಟ್ಟೆಯ ಏರಿಳಿತ ಹಾಗೂ ಕೊಕ್ಕೊ ವಲಯದ ಸವಾಲುಗಳ ನಡುವೆಯೂ ಕ್ಯಾಂಪ್ಕೊ 2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆ ಸಾಧನೆ ಮಾಡಿದ್ದು, ₹3,735 ಕೋಟಿ ವಹಿವಾಟು ಹಾಗೂ ₹49.62 ಕೋಟಿ ತೆರಿಗೆಪೂರ್ವ ಲಾಭ ಗಳಿಸಿದೆ. ಸದಸ್ಯರಿಗೆ ಶೇ.14ರಷ್ಟು ಡಿವಿಡೆಂಡ್ ನೀಡಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.
ಅವರು ನಗರದ ಕ್ಯಾಂಪ್ಕೊ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಡಿಕೆ ವಹಿವಾಟಿನಲ್ಲಿ ₹2,924.32 ಕೋಟಿ ಮೌಲ್ಯದ 58,742.76 ಮೆಟ್ರಿಕ್ ಟನ್ ಅಡಿಕೆಯನ್ನು ಖರೀದಿಸಲಾಗಿದ್ದು, ₹2,985.19 ಕೋಟಿ ಮೌಲ್ಯದ 59,088.64 ಮೆಟ್ರಿಕ್ ಟನ್ ಅಡಿಕೆಯನ್ನು ಮಾರಾಟ ಮಾಡಲಾಗಿದೆ. ಆಮದು ಅಡಿಕೆಯಿಂದ ದೇಶೀಯ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ, ತಪ್ಪು ವರ್ಗೀಕರಣ ಹಾಗೂ ಆಮದು ಅಡಿಕೆಯನ್ನು ದೇಶೀಯ ಉತ್ಪನ್ನದೊಂದಿಗೆ ಮಿಶ್ರಣ ಮಾಡುವ ಪ್ರಕರಣಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ. ಉತ್ತರ ಪ್ರದೇಶದ ಮಂಡಿ ತೆರಿಗೆ ವಿಚಾರವನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಅವರು ಕೊಕ್ಕೊ ಹಾಗೂ ಚಾಕೊಲೇಟ್ ವಿಭಾಗದಲ್ಲೂ ಸಂಸ್ಥೆ ಉತ್ತಮ ಸಾಧನೆ ಮಾಡಿದೆ. ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ 1,16,275 ಕೊಕ್ಕೊ ಸಸಿಗಳನ್ನು ವಿತರಿಸಲಾಗಿದೆ. ಸದಸ್ಯರ ವಿವಿಧ ಕಲ್ಯಾಣ ಯೋಜನೆಗಳಡಿ 120 ಫಲಾನುಭವಿಗಳಿಗೆ ಒಟ್ಟು ₹86.42 ಲಕ್ಷ ನೆರವು ನೀಡಲಾಗಿದೆ.
ಡಿಜಿಟಲ್ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ‘ಕ್ಯಾಂಪ್ಕೊ ಕಿಸಾನ್ ಮಿತ್ರ’ ಆ್ಯಪ್ ಹಾಗೂ ‘ಕ್ಯಾಂಪ್ಕೊ ಕಾರ್ಟ್’ ಸೇವೆಗಳನ್ನು ಪರಿಚಯಿಸಲಾಗಿದೆ. ರಿಪ್ಪನ್‌ಪೇಟೆ, ಚೇಳೂರು ಹಾಗೂ ಸರಪಾಡಿಯಲ್ಲಿ ಹೊಸ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ 130 ಮೆಟ್ರಿಕ್ ಟನ್ ಭಾರತೀಯ ಅಡಿಕೆಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗಿದೆ.
2026-27ನೇ ಸಾಲಿನಲ್ಲಿ ಖರೀದಿ ಜಾಲವನ್ನು ಮತ್ತಷ್ಟು ವಿಸ್ತರಿಸುವುದು, ಒಂದು ಲಕ್ಷ ಕೊಕ್ಕೊ ಸಸಿಗಳನ್ನು ವಿತರಿಸುವುದು, ಚಾಕೊಲೇಟ್ ಉತ್ಪಾದನೆ ಹೆಚ್ಚಿಸುವುದು, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆ ಮತ್ತು ರೈತಪರ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ನಿರ್ದೇಶಕ ಪುರುಷೋತ್ತಮ ಭಟ್, ಡೆಪ್ಯುಟಿ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಗೋವಿಂದ ಭಟ್ ಹಾಗೂ ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ ಉಪಸ್ಥಿತರಿದ್ದರು

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page