ಮಂಗಳೂರು : ಯುದ್ಧದಿಂದಾಗಿ 6 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು – ಕುವೈಟ್ ವಿಮಾನ ಸಂಚಾರ ಪುನರಾರಂಭಗೊಳ್ಳುವ ಸೂಚನೆ ಸಿಕ್ಕಿದೆ. ಈಗ ದೊರಕಿದ ವೇಳಾಪಟ್ಟಿಯಂತೆ ಅಕ್ಟೋಬರ್ ಕೊನೆ ವಾರದಿಂದ ಮಂಗಳೂರು – ಕುವೈಟ್ ಮಧ್ಯೆ ನೇರ ವಿಮಾನ ಆರಂಭಿಸುವುದಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಮುಂದಾಗಿರುವುದಾಗಿ ವರದಿ ಬಂದಿದೆ.
ಮೂಲಗಳ ಮಾಹಿತಿ ಪ್ರಕಾರ ಅ. 27ರಿಂದ ವಾರಕ್ಕೆ ಮೂರು ಬಾರಿ ಎಂದರೆ ಮಂಗಳ, ಶುಕ್ರ, ಶನಿವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರು – ಕುವೈಟ್ ಮಧ್ಯೆ ಪ್ರಯಾಣಿಸಲಿದೆ.
ಇರಾನ್-ಇಸ್ರೇಲ್, ಅಮೆರಿಕ ಯುದ್ಧ ಆರಂಭಗೊಂಡ ಬಳಿಕ ಗಲ್ಫ್ ರಾಷ್ಟ್ರಗಳ ವಿಮಾನ ಸಂಪರ್ಕ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ಯುದ್ಧದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಬಹುತೇಕ ರಾಷ್ಟ್ರಗಳಿಗೆ ವಿಮಾನಯಾನ ಪುನರಾರಂಭಗೊಂಡಿತ್ತು. ಆದರೆ ಕುವೈತ್ ವಿಮಾನ ಮಾತ್ರ ಮತ್ತೆ ಯಾನ ಆರಂಭಿಸಿಲ್ಲ. ಯುದ್ಧದ ಮೊದಲು ವಾರಕ್ಕೆ 3 ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳು ಕುವೈಟ್-ಮಂಗಳೂರು ನಡುವೆ ಕಾರ್ಯಚರಿಸುತ್ತಿದ್ದವು.
ಯುದ್ದದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿ ಕುವೈತ್ ವಿಮಾನ ನಿಲ್ದಾಣ ಹಾನಿಗೊಂಡಿತ್ತು, ಅದನ್ನು ಸರಿಪಡಿಸಲಾಯಿತಾದರೂ ತೀರಾ ಇತ್ತೀಚೆಗಿನವರೆಗೂ ಜಝೀರಾ ಏರ್ಲೈನ್ಸ್ ಹಾಗೂ ಕುವೈತ್ ಏರ್ವೇಸ್ ಮಾತ್ರವೇ ಕಾರ್ಯಾಚರಿಸುತ್ತಿದ್ದವು. ವಿದೇಶಿ ವಿಮಾನಗಳು ನಿಧಾನವಾಗಿ ಇದೀಗ ಆರಂಭವಾಗುತ್ತಿವೆ.















