ಉಡುಪಿ : ಬಾಡಿಗೆ ಮನೆಯ ಠೇವಣಿ ಹಣವನ್ನು ಮರಳಿ ನೀಡಿಲ್ಲ ಎಂಬ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ. ಆರೋಪಿ ಸುರೇಶ್ ಆಚಾರ್ಯ (48) ಅಕ್ಕಸಾಲಿಗನಾಗಿದ್ದು, ಮಾರಕಾಯುಧ ಸಮೇತ ಆಸಿಡ್ ಹಿಡಿದು ಅಂಗಡಿಗೆ ನುಗ್ಗಿ ಮಾಲಕ ನವೀನ್ ಕುಮಾರ್ ಅವರ ಮೇಲೆ ಎರಚಿದ್ದಾನೆ. ಘಟನೆಯಲ್ಲಿ ಇಂದ್ರಾಳಿ ಬುಡ್ನಾರು ನಿವಾಸಿ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಾಡಿಗೆ ಮನೆಯ ಠೇವಣಿ ಹಣವನ್ನು ಹಿಂದಿರುಗಿಸುವ ವಿಚಾರದಲ್ಲಿ ಉಂಟಾದ ವಿವಾದ ದಾಳಿಗೆ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಆರೋಪಿ ಸುರೇಶ್ ಆಚಾರ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನವೀನ್ ಅವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆರೋಪಿ ಸುರೇಶ್ ಆಚಾರ್ಯ, ಮನೆ ಖಾಲಿ ಮಾಡುವ ವೇಳೆ ತಾನು ನೀಡಿದ್ದ 20 ಸಾವಿರ ರೂ. ಡೆಪಾಸಿಟ್ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ. ಆದರೆ, ಸುಸ್ಥಿತಿಯಲ್ಲಿದ್ದ ಬಾಡಿಗೆ ಮನೆಯನ್ನು ಹಾಳು ಮಾಡಿದ್ದ ಎಂಬ ಕಾರಣಕ್ಕೆ ನವೀನ್ ಡೆಪಾಸಿಟ್ ಮೊತ್ತವನ್ನು ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಈ ಹಿಂದೆಯೂ ಇಬ್ಬರ ನಡುವೆ ಚರ್ಚೆ ನಡೆದಿದ್ದು, ನಿನ್ನೆ ಮತ್ತೆ ನವೀನ್ ಅವರ ಅಂಗಡಿಗೆ ತೆರಳಿದ್ದ ಆರೋಪಿ ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಸುರೇಶ್ ಆಚಾರ್ಯ, ತನ್ನ ಸ್ಕೂಟಿಯಲ್ಲಿ ತಂದಿದ್ದ ತಲವಾರು ಹಾಗೂ ಆಸಿಡ್ ಹೊರತೆಗೆದು ದಾಳಿ ನಡೆಸಿ, ಕೃತ್ಯದ ಬಳಿಕ ಅದೇ ಸ್ಕೂಟಿಯಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.












