ಪುತ್ತೂರು : ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯ ಟರ್ಮ್ ಶೀಟ್ ಬದಲಾವಣೆಯಿಂದ ಬೆಳೆಗಾರರಿಗೆ ಸಿಗುತ್ತಿದ್ದ ವಿಮಾ ಪರಿಹಾರದ ಮೊತ್ತ ಕಡಿಮೆಯಾಗಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಬಿಜೆಪಿ ಮಾಡುತ್ತಿರುವ ಆರೋಪ ಅಪ್ಪಟ ಸುಳ್ಳು. 2023ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲೇ ಟರ್ಮ್ ಶೀಟ್ ಬದಲಾವಣೆಯಾಗಿತ್ತು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಮೇ 20ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿತ್ತು. ಅದಕ್ಕಿಂತ ಒಂದು ದಿನ ಮೊದಲು, ಮೇ 19ರಂದು ಬೆಳೆ ವಿಮೆ ಯೋಜನೆಯ ಹಂಚಿಕೆಗೆ ಟೆಂಡರ್ ಕರೆಯಲಾಗಿತ್ತು. ವಿಮೆ ವಹಿಸಿಕೊಳ್ಳಲು ಯಾವುದೇ ಕಂಪನಿಗಳು ಮುಂದೆ ಬರದ ಕಾರಣ ಟರ್ಮ್ ಶೀಟ್ ಬದಲಾವಣೆ ಮಾಡಿ ಟೆಂಡರ್ ಕರೆಯಲಾಗಿತ್ತು. ಈ ಬೆಳವಣಿಗೆ ಬಸವರಾಜ ಬೊಮ್ಮಾಯಿ ಅವರು ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿತ್ತು. ಆದರೆ ಬಿಜೆಪಿಯವರು ಈ ವಿಚಾರವನ್ನು ಮುಚ್ಚಿಟ್ಟು, ಕಾಂಗ್ರೆಸ್ ಸರಕಾರವೇ ಟರ್ಮ್ ಶೀಟ್ ಬದಲಾವಣೆ ಮಾಡಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಾಗ, ರಾಜ್ಯದಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅದನ್ನು ಸ್ವೀಕರಿಸಿತ್ತು. ಆದರೆ ಬಿಜೆಪಿ ಆಡಳಿತವಿರುವ ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಈ ಯೋಜನೆಯನ್ನು ಸ್ವೀಕರಿಸಿರಲಿಲ್ಲ. ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ಶೇ.10 ಹಾಗೂ ರೈತರ ಪಾಲು ಶೇ.5ರಷ್ಟಿದ್ದು, ರಾಜ್ಯಗಳ ಪಾಲನ್ನು ಮಾತ್ರ ಕಾಲಕಾಲಕ್ಕೆ ಹೆಚ್ಚಿಸುವ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದೆ ಎಂದು ತಿಳಿಸಿದರು.
ಟರ್ಮ್ ಶೀಟ್ ಬದಲಾವಣೆಯಿಂದ ಸಮಸ್ಯೆಯಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ರೂಪಿಸಿದ ಕಾನೂನಿನಲ್ಲೇ ಟರ್ಮ್ ಶೀಟ್ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಮಾರ್ಗಸೂಚಿಯನ್ನೇ ಬದಲಾಯಿಸಲಿ. ವಿಮಾ ಕಂಪನಿಗಳು ಮೋಸ ಮಾಡುತ್ತಿವೆ ಎಂಬ ಆರೋಪವಿದ್ದರೆ, ವಿಮಾ ನಿಯಂತ್ರಣ ಪ್ರಾಧಿಕಾರದ ಮೂಲಕ ಕೇಂದ್ರ ಸರಕಾರ ತನಿಖೆಗೆ ಆದೇಶಿಸಬಹುದು. ಅದನ್ನು ಮಾಡಲಿ ಎಂದು ಸವಾಲು ಹಾಕಿದರು.
ಆರಂಭದಲ್ಲಿ ರಾಜ್ಯ ಸರಕಾರ ಶೇ.50ರಷ್ಟು ಪಾಲು ನೀಡುತ್ತಿತ್ತು. ಹೊಸ ಟರ್ಮ್ ಶೀಟ್ ಪ್ರಕಾರ ರಾಜ್ಯದ ಪಾಲು ಶೇ.20ಕ್ಕೆ ಇಳಿದಿದೆ. ಆದರೆ ಕೇಂದ್ರ ಸರಕಾರದ ಶೇ.10 ಮತ್ತು ರೈತರ ಶೇ.5ರ ಪಾಲಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಟರ್ಮ್ ಶೀಟ್ ಬದಲಾವಣೆಯೇ ಸಮಸ್ಯೆಗೆ ಕಾರಣವಾಗಿದ್ದರೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಅಡಕೆ ಬೆಳೆಗಾರರಿಗೆ ಒಂದೇ ರೀತಿಯ ವಿಮಾ ಪರಿಹಾರ ಸಿಗಬೇಕಿತ್ತು. ಆದರೆ ಗ್ರಾಮದಿಂದ ಗ್ರಾಮಕ್ಕೆ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಿದೆ. ಮಳೆ, ತಾಪಮಾನ ಮತ್ತು ತೇವಾಂಶದ ಆಧಾರದಲ್ಲಿ ವಿಮಾ ಪರಿಹಾರ ನಿರ್ಧಾರವಾಗುವುದರಿಂದ ಈ ವ್ಯತ್ಯಾಸ ಉಂಟಾಗುತ್ತದೆ ಎಂದು ವಿವರಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರವೇ ಟರ್ಮ್ ಶೀಟ್ ಬದಲಾವಣೆ ಮಾಡಿದೆ ಎಂಬುದು ನಿಜವಾಗಿದ್ದರೆ, ಈ ಬಗ್ಗೆ ಆರೋಪ ಮಾಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಳೆದ ಮೂರು ವರ್ಷಗಳಲ್ಲಿ ವಿಧಾನಸಭೆಯಲ್ಲಿ ಒಮ್ಮೆಯೂ ಏಕೆ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜು, ತಾಲೂಕು ಕ್ರೀಡಾಂಗಣ, ಆರ್ಟಿಒ ಟ್ರ್ಯಾಕ್, ಶ್ರಮಿಕ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ತಾಲೂಕು ಪಂಚಾಯಿತಿ ಕಟ್ಟಡ ಹಾಗೂ ದೇವಳದ ಜಾಗ ಮರುಸ್ವಾಧೀನದಂತಹ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಹರೀಶ್ ಪೂಂಜ ಅವರು ಕಳೆದ ಮೂರು ವರ್ಷಗಳಲ್ಲಿ ಯಾವ ಯೋಜನೆಗಳನ್ನು ರೂಪಿಸಿದ್ದಾರೆ ಎಂಬುದನ್ನು ಅವರೇ ತಿಳಿಸಲಿ ಎಂದು ಅಮಳ ರಾಮಚಂದ್ರ ಹೇಳಿದರು.
ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯು ನಿಗೂಢವಾಗಿದ್ದು, ಇದರ ಸಂಪೂರ್ಣ ಕಾರ್ಯವೈಖರಿ ಯಾರಿಗೂ ಅರ್ಥವಾಗಿಲ್ಲ. ರೈತರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೇರಿ ಶೇ.35ರಷ್ಟು ಹಣವನ್ನು ಪಾವತಿಸಿದ ಬಳಿಕ ಅಷ್ಟೇ ಮೊತ್ತದ ಹಣ ವಿಮಾ ಪರಿಹಾರವಾಗಿ ಸಿಗುವುದಾದರೆ, ಇಂತಹ ವಿಮಾ ಯೋಜನೆಯ ಅಗತ್ಯವೇನು? ಸರಕಾರಗಳೇ ತಮ್ಮ ಪಾಲಿನ ಹಣವನ್ನು ಸೇರಿಸಿ ರೈತರಿಗೆ ನೇರವಾಗಿ ನೀಡಬಹುದಲ್ಲವೇ? ಹಾಗಾದರೆ ಮಧ್ಯವರ್ತಿಗಳಾದ ಖಾಸಗಿ ವಿಮಾ ಕಂಪನಿಗಳ ಅಗತ್ಯವೇನು? ಖಾಸಗಿ ವಿಮಾ ಕಂಪನಿಗಳನ್ನು ಸಾಕಲೆಂದೇ ಮೋದಿ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆಯೇ ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರಹಿಮಾನ್ ಆಜಾದ್, ಕಮಲೇಶ್ ಸರ್ವೆದೋಳ, ಸಂತೋಷ್ ಭಂಡಾರಿ ಚಿಲ್ಮೆತ್ತಾರು ಹಾಗೂ ರಾಮ ಮೇನಾಲ ಉಪಸ್ಥಿತರಿದ್ದರು.














