ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಹಸುಗಳ ರಕ್ಷಣೆ ಮತ್ತು ಅವುಗಳ ಬಗ್ಗೆ ಕಾಳಜಿವಹಿಸುತ್ತಿರುವ ಬಗ್ಗೆ ಮಾತನಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೊ ನೋಡಿದ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಬ್ಯುಸಿನೆಸ್ ಟುಡೆ’ ಹಂಚಿಕೊಂಡಿರುವ ವಿಡಿಯೊದಲ್ಲಿ ಅನಂತ್ ಅವರು ಮಾತನಾಡಿ, ‘ಸುಮಾರು 9 ಲಕ್ಷ ಗೋವುಗಳ ಪಾಲನೆ ಮಾಡುತ್ತಿದ್ದೇವೆ. ಇವುಗಳಲ್ಲಿ ವಿವಿಧ ಕಾರಣಗಳಿಂದ ಹಾಲು ನೀಡದ ಏಳು ಲಕ್ಷ ಗೋವುಗಳು ಸೇರಿವೆ. ಇವುಗಳಲ್ಲಿ ಅಪಘಾತಕ್ಕೀಡಾದವು ಮತ್ತು ರಕ್ಷಿಸಲ್ಪಟ್ಟ ಕೆಲವು ಗೋವುಗಳೂ ಇವೆ. ಗೋಮಾತೆಯನ್ನು ರಕ್ಷಿಸಲು ಎಂಟು ರಾಜ್ಯಗಳಲ್ಲಿ 100 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ್ದೇವೆ. ಅದರ ಮೂಲಕ ಇಲ್ಲಿಯವರೆಗೆ ಸುಮಾರು 50,000 ಹಸುಗಳನ್ನು ರಕ್ಷಿಸಲಾಗಿದೆ. ಪ್ರಾಣಿಗಳನ್ನು ಕಸಾಯಿಖಾನೆಗಳಿಂದ ರಕ್ಷಿಸುವ ಪ್ರಯತ್ನದ ಭಾಗವಾಗಿ, ಗೋಹತ್ಯೆ ಕಾನೂನುಬದ್ಧವಾಗಿರುವ ಎರಡು–ಮೂರು ರಾಜ್ಯಗಳಲ್ಲಿ ನಮ್ಮ ತಂಡದವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ತಮ್ಮ ದಿನಚರಿಯ ಬಗ್ಗೆ ಹಂಚಿಕೊಂಡಿರುವ ಅನಂತ್, ‘ನಮ್ಮ ಮನೆಯಲ್ಲಿ ಆರು ಹಸುಗಳಿವೆ. ಕೆಲಸಕ್ಕೆ ತೆರಳುವ ಮುನ್ನ ಪ್ರತಿದಿನ ಅವುಗಳೊಂದಿಗೆ ಸಮಯ ಕಳೆಯುತ್ತೇನೆ. ಗೋ ಸಂರಕ್ಷಣೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕಾರ್ಯಗಳೇ ನನಗೆ ಸ್ಫೂರ್ತಿಯ ಮೂಲ’ ಎಂದು ವಿವರಿಸಿದ್ದಾರೆ. ಅನಂತ್ ಅಂಬಾನಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಈಗಾಗಲೇ ವಂತಾರ ಮೂಲಕ ಪ್ರಾಣಿಗಳ ಆರೈಕೆ, ರಕ್ಷಣೆ ಮಾಡುತ್ತಿರುವುದು ಮತ್ತು ಈಗ ಗೋವುಗಳ ರಕ್ಷಣೆ ಮಾಡುತ್ತಿರುವುದಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.














