ಪುತ್ತೂರು: ಆಯುರ್ವೇದ, ಔಷಧ ಸಂಶೋಧನೆ, ಉದ್ಯಮಶೀಲತೆ ಮತ್ತು ಕಲೆ-ಸಂಸ್ಕೃತಿ ಕ್ಷೇತ್ರದ ಕೊಡುಗೆಗಾಗಿ ಪುತ್ತೂರಿನ ಖ್ಯಾತ ಆಯುರ್ವೇದ ವೈದ್ಯ ಡಾ. ಹರಿಕೃಷ್ಣ ಪಾಣಾಜೆ ಅವರಿಗೆ ಕನ್ನಡ ಪ್ರಭ – ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ಕೊಡಮಾಡುವ ಪ್ರತಿಷ್ಠಿತ ‘ಆಯುರ್ಭೂಷಣ’ ಪುರಸ್ಕಾರ ಲಭಿಸಿದೆ.
ಸೆ.26ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ಪಾಣಾಜೆ ಅವರು 1986ರಲ್ಲಿ ಪರ್ಲಡ್ಕದಲ್ಲಿ ಶ್ರೀ ದುರ್ಗಾ ಕ್ಲಿನಿಕ್ ಆರಂಭಿಸಿ, 1988ರಲ್ಲಿ ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್ ಸ್ಥಾಪಿಸಿದರು.
2018ರಲ್ಲಿ ಮೂಡೂರಿನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಆರಂಭಿಸಿದ ಸಂಸ್ಥೆಗೆ ಸರ್ ಎಂ. ವಿಶ್ವೇಶ್ವರಯ್ಯ Manufacturing Excellence Award, KSFC Best Entrepreneur Award (2019), ISO ಸೇರಿದಂತೆ ‘ಸಮಾಜ ರತ್ನ’, ‘ವೈದ್ಯ ರತ್ನ’, ‘ಆಯುಷ್ ಶ್ರೀ’, ‘ಆಯುರ್ವೇದ ವಿಶ್ವ ರತ್ನ’ ಪ್ರಶಸ್ತಿಗಳು ಲಭಿಸಿವೆ.
ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಪಾಣಾಜೆ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ, ಆಯುಷ್ ಫೆಡರೇಶನ್ ಆಫ್ ಇಂಡಿಯಾ ಪುತ್ತೂರು ಘಟಕದ ಅಧ್ಯಕ್ಷರಾಗಿ ಅವರು ಸಕ್ರಿಯರಾಗಿದ್ದಾರೆ.
2005ರಲ್ಲಿ ಆರಂಭಿಸಿದ ‘ಕಲೋಪಾಸನಾ’ ಮೂಲಕ ಬಾಲಮುರಳಿ ಕೃಷ್ಣ, ಉನ್ನಿಕೃಷ್ಣ, ಬಾಂಬೆ ಜಯಶ್ರೀ, ಸುಧಾ ರಘುನಾಥನ್, ಸಂಜಯ್ ಸುಬ್ರಹ್ಮಣ್ಯ ಸೇರಿದಂತೆ ರಾಷ್ಟ್ರಮಟ್ಟದ ಕಲಾವಿದರನ್ನು ಪುತ್ತೂರಿಗೆ ಕರೆತಂದು ಉಚಿತ ಕಲಾ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಆಯುರ್ವೇದ ಪರಂಪರೆ, ಉದ್ಯಮ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಕೊಡುಗೆಗಾಗಿ ಸಂದಿರುವ ಈ ಗೌರವ ಪುತ್ತೂರು ಹಾಗೂ ದ.ಕ. ಜಿಲ್ಲೆಗೆ ಸಂಭ್ರಮ ತಂದಿದೆ.














