ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮುನ್ಸೂಚನೆ ನೀಡಿದೆ. ಈ ಚಂಡಮಾರುತಕ್ಕೆ ‘ಒರ್ನಾಬ್’ ಎಂದು ಹೆಸರಿಸಲಾಗಿದೆ. ಅಕ್ಟೋಬರ್ 27ರ ವೇಳೆಗೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಮಂಗಳವಾರ ಬೆಳಿಗ್ಗೆ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ.
ಐಎಂಡಿ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಇಂದು ಬೆಳಿಗ್ಗೆ ಪೂರ್ವ-ಮಧ್ಯ ಮತ್ತು ಸಮೀಪದ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವು ಕೇಂದ್ರೀ ಕೃತವಾಗಿತ್ತು. ಕಳೆದ ಆರು ಗಂಟೆಗಳಲ್ಲಿ ಇದು ಗಂಟೆಗೆ 15 ಕಿ.ಮೀ ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದೆ ಎಂದು ತಿಳಿಸಿದೆ. ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಗಳಿದ್ದು, ಸೋಮವಾರ ಮಧ್ಯರಾತ್ರಿಯ ವೇಳೆಗೆ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರ ಚಂಡಮಾರುತವಾಗಿ ರೂಪುಗೊಳ್ಳಲಿದೆ. ಇದು ವಾಯುವ್ಯ ದಿಕ್ಕಿನತ್ತ ಸಾಗಿ, ಅಕ್ಟೋಬರ್ 28ರ ಮಧ್ಯಾಹ್ನದ ಒಳಗೆ ಬಾಪಟ್ಲ ಮತ್ತು ವಿಶಾಖಪಟ್ಟಣ ನಡುವೆ ಆಂಧ್ರಪ್ರದೇಶ ಹಾಗೂ ಯಾಣಂ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಈ ವೇಳೆ ಗಂಟೆಗೆ 125 ರಿಂದ 140 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಚಂಡಮಾರುತದ ಪ್ರಭಾವದಿಂದ ಕರಾವಳಿ ಆಂಧ್ರಪ್ರದೇಶ, ಯಾಣಂ ಮತ್ತು ರಾಯಲಸೀಮಾದ ಕೆಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅ.29ರವರೆಗೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಮುಂಬರುವ ಮೂರು ದಿನಗಳು ನಿರ್ಣಾಯವೆನಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.














