ಭಿನ್ನ ನಿಲುವು ತಾಳಿದ ಭಾರತ-ಚೀನಾ!

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಶನಿವಾರದ ಮಹತ್ವದ ಸಭೆಯ ನಂತರ, ಎರಡೂ ದೇಶಗಳು ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಗಳು ಗಡಿ ವಿವಾದ ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಭಾರತ ಮತ್ತು ಚೀನಾ ಹೇಗೆ ವಿಭಿನ್ನವಾಗಿ ನೋಡುತ್ತಿವೆ ಎಂಬುದನ್ನು ಸ್ಪಷ್ಟಪಡಿಸಿವೆ.
ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಶನಿವಾರ ಇಬ್ಬರು ಉಭಯ ನಾಯಕರ ನಡುವೆ ಮಹತ್ವದ ಮಾತುಕತೆ ನಡೆದಿದೆ. 2020ರ ಗಲ್ವಾನ್ ಕಣಿವೆಯ ಸಂಘರ್ಷದ ನಂತರ, ಬರೋಬ್ಬರಿ ಏಳು ವರ್ಷಗಳ ಬಳಿಕ ಚೀನಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿರುವುದು ಈ ಸಭೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಆದರೆ, ಸಭೆಯ ನಂತರ ಹೊರಬಿದ್ದಿರುವ ಉಭಯ ದೇಶಗಳ ಹೇಳಿಕೆಗಳಲ್ಲಿ ಸಂಪೂರ್ಣ ಭಿನ್ನಾಭಿಪ್ರಾಯವಿದೆ.

Advertisement

ಇನ್ನು ಚೀನಾ ತನ್ನ ಹೇಳಿಕೆಯಲ್ಲಿ ಎರಡೂ ದೇಶಗಳು ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಬೇಕು ಮತ್ತು ಅದೇ ಸಮಯದಲ್ಲಿ ಗಡಿ ಸಮಸ್ಯೆಯನ್ನೂ ಬಗೆಹರಿಸಿಕೊಳ್ಳಬೇಕು ಎಂದಿದೆ. ಅಂದರೆ, ಎರಡೂ ರಂಗಗಳಲ್ಲಿ “ಸಮಾನಾಂತರ ಮತ್ತು ಪರಸ್ಪರ ಪೂರಕ ಪ್ರಗತಿ” ಸಾಧಿಸಬೇಕು ಹಾಗೂ ಗಡಿಯಲ್ಲಿ ಶಾಂತಿ ಕಾಪಾಡಬೇಕು ಎಂಬುದು ಚೀನಾದ ವಾದ. ರಾಜಕೀಯ ಮುತ್ಸದ್ದಿತನ, ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ಮುನಿಸುಗಳನ್ನು ಮರೆತು ಸಂಬಂಧಗಳನ್ನು ವೃದ್ಧಿಸೋಣ ಎಂದು ಚೀನಾ ಪ್ರತಿಪಾದಿಸಿದೆ.

Advertisement
Advertisement

ಆದರೆ ಭಾರತ ಬಿಡುಗಡೆ ಮಾಡಿರುವ ವರದಿ ತೀರಾ ಭಿನ್ನವಾಗಿದೆ. ಪ್ರಧಾನಿ ಮೋದಿ ಅವರು, ಗಡಿ ಭಾಗದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವುದು ದ್ವಿಪಕ್ಷೀಯ ಸಂಬಂಧಗಳ ಮುಂದುವರಿಕೆಗೆ ಅತ್ಯಗತ್ಯ ಮತ್ತು ಮೂಲಭೂತ ಆಧಾರ ಎಂದಿದ್ದಾರೆ. ಅಷ್ಟೇ ಅಲ್ಲದೆ, ಗಡಿಗೆ ಸಂಬಂಧಿಸಿದಂತೆ ಈಗಾಗಲೇ ಮಾಡಿಕೊಳ್ಳಲಾಗಿರುವ ಒಪ್ಪಂದಗಳನ್ನು ಎರಡೂ ದೇಶಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page