ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸವನ್ನು ಮುಂದಿಟ್ಟುಕೊಂಡು ಬಿಜೆಪಿ ತೀವ್ರ ವ್ಯಂಗಮಾಡಿದೆ. ಕೆಲಸ ಮಾಡುವುದಕ್ಕಿಂತ ರಜೆಯಲ್ಲಿ ಮೋಜು ಮಾಡುವುದಕ್ಕೆ ಹೆಚ್ಚು ಸಮಯ ಕಳೆಯುವ ರಾಹುಲ್, ಬಳಿಕ ಮತಗಳ್ಳತನ ಎಂದು ಕೂಗಾಡುತ್ತಾರೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಮತ್ತೆ ವಿದೇಶಕ್ಕೆ ರಜೆಯ ಮೋಜು ಅನುಭವಿಸಲು ತೆರಳಿದ್ದಾರೆ ಎಂದು ಆರೋಪಿಸಿರುವ ಭಂಡಾರಿ, ರಾಹುಲ್ ಗಾಂಧಿ ಮತ್ತೆ ರಜೆಯಲ್ಲಿ! ಎಂಬ ಶೀರ್ಷಿಕೆಯ ಮೀಮ್ವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ತಮಗೆ ಅತ್ಯಂತ ಇಷ್ಟವಾದ ಕೆಲಸಕ್ಕೆ ಮರಳಿದ್ದಾರೆ. ಅದುವೇ ರಜೆ ತೆಗೆದುಕೊಂಡು ಮೋಜು ಮಾಡುವುದು! ಅವರು ರಜೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಸದ್ಯ ಅವರು ಭಾರತದಲ್ಲಿಲ್ಲ ಎಂದು ಭಂಡಾರಿ ಹೇಳಿದ್ದಾರೆ.














