ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಈಗ ಇರುವ ಸ್ಥಳದಲ್ಲಿಯೇ ಉಳಿಸಿಕೊಳ್ಳಬೇಕು. ಕ್ಯಾನ್ಸರ್ ಚಿಕಿತ್ಸೆಯ ಕಿದ್ವಾಯಿ ಆಸ್ಪತ್ರೆ ಹಾಗೂ ಹೃದಯರೋಗ ಸಂಬಂಧಿತ ಜಯದೇವ ಆಸ್ಪತ್ರೆಯ ಶಾಖೆಗಳನ್ನು ಪುತ್ತೂರಿನಲ್ಲಿ ತೆರೆಯಬೇಕು ಎಂದು ಆಗ್ರಹಿಸಿ ಪುತ್ತೂರು ಆಡಳಿತಸೌಧದ ಮುಂಭಾಗ ಸಿಪಿಐಎಂ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ಅವರು ತಾಲೂಕಿಗೊಂದು ಆರೋಗ್ಯ ಸೇವೆಯ ಆಸ್ಪತ್ರೆ ನೀಡಲಾರದ ಸರ್ಕಾರಗಳು ನಮ್ಮ ಆರೋಗ್ಯದ ಬಗ್ಗೆ ಹೇಗೆ ಚಿಂತನೆ ಮಾಡುತ್ತವೆ. ಪುತ್ತೂರು ತಾಲೂಕಿನಲ್ಲಿ ಯಾವುದೇ ಸವಲತ್ತುಗಳಿಲ್ಲ. ತಜ್ಞ ವೈದ್ಯರಿಲ್ಲ. ಗರ್ಭಿಣಿಯರನ್ನು ಕರೆದುಕೊಂಡು ಹೋದರೂ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ. ಔಷಧಿಗಳಿಲ್ಲ. ಇದು ಸರ್ಕಾರಗಳ ಆರೋಗ್ಯ ಕೆಟ್ಟಿದೆ ಎಂಬುವುದನ್ನು ಸಾಬೀತುಪಡಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಈ ದೇಶದ ಪ್ರಜೆಗಳ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಈಗ ದಾಖಲೆಗಳನ್ನು ಕೇಳಲಾಗುತ್ತಿದೆ. ಈ ರೀತಿಯ ಮೂರ್ಖತನದ ಕಾನೂನು ಮಾಡುವ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಆರೋಗ್ಯ ಸರಿ ಇದೆಯಾ ಎಂದು ಪ್ರಶ್ನಿಸಿದ ಅವರು ನಾವು ಕೇವಲ ಮತ ಕೊಡಲು ಮಾತ್ರ ಎಂದು ಈ ಸರ್ಕಾರ ನಂಬಿ ಕೊಂಡಿದೆ. ಅಧಿಕಾರ ಸಿಕ್ಕಿದ ತಕ್ಷಣ ಅವರು ನಮ್ಮನ್ನು ಮೋಸ ಮಾಡುತ್ತಾರೆ. ನಮ್ಮ ಆರೋಗ್ಯದ ಕಾಳಜಿ ಇಲ್ಲದಂತಹ ಸರ್ಕಾರಗಳಿಂದ ನಮ್ಮ ಮೂಲಭೂತ ಅಗತ್ಯಗಳನ್ನು ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲ. ಇದನ್ನು ಪ್ರಶ್ನೆ ಮಾಡುವುದಕ್ಕೂ ಗೊತ್ತಿಲ್ಲ. ಪ್ರಶ್ನೆ ಮಾಡಿದವರಿಗೆ ದೆಹಲಿಯಲ್ಲಿ ಪೆಟ್ಟು ಬೀಳುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಯಾವ ಇಲಾಖೆಗಳ ಆರೋಗ್ಯವೂ ಸರಿ ಇಲ್ಲ ಎಂಬುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಸಿಪಿಐಎಂ ಪುತ್ತೂರು ತಾಲೂಕು ಸಮಿತಿ ಕಾರ್ಯದರ್ಶಿ ನ್ಯಾ.ಪಿ.ಕೆ.ಸತೀಶನ್ ಅವರು ಪ್ರತಿಭಟನೆಗೆ ಚಾಲನೆ ನೀಡಿ, ಪುತ್ತೂರಿನ ಪೇಟೆ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಸೌಲಭ್ಯಪೂರ್ಣ ಆಸ್ಪತ್ರೆಯನ್ನಾಗಿ ಮಾಡಬೇಕು. ಪುತ್ತೂರಿನಲ್ಲಿ ಕ್ಯಾನ್ಸರ್ ಪೀಡಿತರಿಗೆ ಅನುಕೂಲವಾಗುವಂತೆ ಕ್ಯಾನ್ಸರ್ ಆಸ್ಪತ್ರೆಯನ್ನು ತೆರೆಯಬೇಕು. ಹೃದಯಚಿಕಿತ್ಸೆಯ ಆರೋಗ್ಯ ರಕ್ಷಣೆಯ ಹಿನ್ನಲೆಯಲ್ಲಿ ಜಯದೇವ ಆಸ್ಪತ್ರೆಯ ಬ್ರಾಂಚ್ ತೆರೆಯಬೇಕು. ಇದು ಇಂದಿನ ಅತ್ಯಂತ ಅಗತ್ಯದ ವಿಚಾರಗಳಾಗಿವೆ ಎಂದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಈಶ್ವರಿ ಎಲ್ ಪದ್ಮುಂಜ, ದಾಮೋದರ ಹಿರೆಬಂಡಾಡಿ, ಕೃಷ್ಣ ನಿಡ್ಪಳ್ಳಿ, ಚಿದಾನಂದ, ಸುಂದರ್ ಗೋಳಿತ್ತಡಿ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ರಂಜಿತಾ, ಕಾರ್ಯದರ್ಶಿ ಲತಾ ಮತ್ತಿತರರು ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.














