ಬಳ್ಳಾರಿ: ಕರ್ನಾಟಕದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಮನೆಗೆ ಹೋಗಲಿದೆ. ಅದನ್ನು ಜನರೇ ತೀರ್ಮಾನಿಸಿಯಾಗಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಭ್ರಷ್ಟ, ಜನವಿರೋಧಿ ಸರ್ಕಾರದ ವಿರುದ್ಧ ನಮ್ಮ ಯುದ್ಧ ಆರಂಭವಾಗಿದೆ. ರಣರಂಗದಲ್ಲಿ ಬಿಜೆಪಿ ಒಂದು ಅಪೂರ್ವವಾದ ಜಯ ಸಾಧಿಸಲಿದೆ. ನಮ್ಮ ಗೆಲುವು ತಡೆಯಲು ಡಿಕೆ, ಬಿಕೆ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಗೆ ಜನಾರ ಆಶೀರ್ವಾದ ಸದಾ ಜೊತೆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅವರು ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆದ ಬಳ್ಳಾರಿ ಚಲೋ ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದರು.
ನಗರದ ಶ್ರೀ ಕನಕದುರ್ಗ ದೇವಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹತ್ತು ದಿನಗಳ ಕಾಲದಿಂದ ಹಮ್ಮಿಕೊಂಡಿದ್ದ ಐತಿಹಾಸಿಕ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಮುಕ್ತಾಯವಾಗುತ್ತಿದೆ. ಪಾದಯಾತ್ರೆ ಮಾತ್ರವೇ ಮುಕ್ತಾಯವಾಗಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮತ್ತೆ ಆರಂಭವಾಗಲಿದೆ. ಮುಂದಿನ ಒಂದೂವರೆ ವರ್ಷಗಳ ಕಾಲ ಇದು ಮುಂದುವರಿಯಲಿದೆ ಎಂದು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಜನ ಈಗಾಗಲೇ ದಿಕ್ಕರಿಸುವ ಮನಸ್ಥಿತಿಗೆ ಬಂದಿದ್ದಾರೆ. ಈ ಸರ್ಕಾರದಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ. ನಾಡಿನ ಬಡವರು, ದೀನದಲಿತರು, ಮಹಿಳೆಯರು, ಕೂಲಿ ಕಾರ್ಮಿಕರಿಗೆ ಯಾವುದೇ ಅನುಕೂಲವನ್ನು ಈ ಸರ್ಕಾರ ಮಾಡಿಲ್ಲ. ನಾನು ಶೇ 90 ಉದ್ಯಮ, ಶೇ 10 ರಷ್ಟು ರಾಜಕಾರಣಿ ಎಂದು ಸಿಎಂ ಹೇಳಿದ್ದಾರೆ. ಅವರ ಮಾತಲ್ಲೇ ಎಲ್ಲ ಅಡಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ವ್ಯವಹಾರ ಮುಖ್ಯವಾಗಿದೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಈ ಸರ್ಕಾರ ಉತ್ತರ ನೀಡಿಲ್ಲ ಎಂದರು.
ಸರ್ಕಾರ ನೂರು ದಿನ ಪೂರೈಸಿದ್ದಕ್ಕೆ ಸಮಾವೇಶ ಮಾಡ್ತಾ ಇದ್ದಾರೆ. ಈ ಸರ್ಕಾರದ ಸಾಧನೆ ಶೂನ್ಯ ಜನರೇ ಇದನ್ನು ಮನೆಮನೆಯಲ್ಲಿ ಹೇಳುತ್ತಿದ್ದಾರೆ. ಇವರದು ಜನಪ್ರಿಯ ಸರ್ಕಾರ ಅಲ್ಲ. ಜಾಹೀರಾತು ಸರ್ಕಾರ ಎಂದು ಟೀಕಿಸಿದರು.
ಯಾವುದೇ ಜನಪರ ಕಾರ್ಯಕ್ರಮ ಕೊಟ್ಟಲ್ಲ. ಬಡವರ, ದೀನದಲಿತ ಶೋಷಣೆ ನಿಂತಿಲ್ಲ. ಯುವಕರಿಗೆ ಉದ್ಯೋಗ ನೀಡಿಲ್ಲ. ನುಡಿದಂತೆ ನಡೆಯುತ್ತಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಶಹಬ್ಬಾಸ್ ಹೇಳಿಕೊಳ್ಳುತ್ತಿದ್ದಾರೆ. ಜಾಹೀರಾತು ನೀಡಿದರೆ ಜನರನ್ನು ತಲುಪಬಹುದು ಎಂಬ ಭ್ರಮೆಯಲ್ಲಿ ಈ ಸರ್ಕಾರ ಇದೆ. ಇದಕ್ಕೆಲ್ಲ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ, ಪಾಠ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.











